ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಏ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಜನಸಮಾವೇಶವನ್ನು ಸಂಘಟಿಸಲಾಗಿದೆ.ಚಿತ್ರದುರ್ಗದ ಎಐಡಿಎಸ್ಓ ಕಚೇರಿಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಸಭೆ ನಡೆಸಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಸಮಿತಿ ಅಧ್ಯಕ್ಷ ಜೆ.ಯಾದವ್ ರೆಡ್ಡಿ ಮಾತನಾಡಿ, ಬಡವರ ಮಕ್ಕಳಿಗೆ ಮರಣ ಶಾಸನವಾಗಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಕಳೆದ ನಾಲ್ಕು ತಿಂಗಳಿನಿಂದ ಹಳ್ಳಿ-ಹಳ್ಳಿಗಳಲ್ಲಿ ಹೋರಾಟ ನಡೆಸಲಾಗಿದೆ. ರಾಜ್ಯಾದ್ಯಂತ ತೀವ್ರ ಜನವಿರೋಧದ ನಡುವೆಯೂ ಸರ್ಕಾರ ಶಾಲೆಗಳನ್ನು ಮುಚ್ಚುವ ಈ ಹುನ್ನಾರವನ್ನು ರಾಜ್ಯ ಸರ್ಕಾರವು ಮುಂದುವರೆಸಿದೆ. ಸರ್ಕಾರದ ಈ ಹಠಮಾರಿ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದರು.ಸರ್ಕಾರದ ಈ ಯೋಜನೆಯನ್ನು ಹಿಮ್ಮೆಟ್ಟಿಸಲು, ಊರಿನ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ರಾಜ್ಯದ ಜನತೆಯ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲು ಏಪ್ರಿಲ್ 10 ರಂದು ರಾಜ್ಯಮಟ್ಟದ ಜನಸಮಾವೇಶವನ್ನು ಸಂಘಟಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಿಂದ ರೈತ-ಕಾರ್ಮಿಕರು ಸೇರಿದಂತೆ ಎಲ್ಲ ಜನ ಸಾಮಾನ್ಯರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಮಟ್ಟದ ಚಳುವಳಿಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಎಐಡಿಎಸ್ಓ ಜಿಲ್ಲಾ ಸಂಚಾಲಕ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿ ಕೆ.ಈರಣ್ಣ ಮಾತನಾಡಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎಂಬ ಮೋಸದ ಪರದೆ ಹೊದಿಸಿ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೊಳಿಸಿದೆ. ನಾವು ಕನ್ನಡಪರ ಎಂದು ಕೊಚ್ಚಿಕೊಳ್ಳುತ್ತ 40 ಸಾವಿರಕ್ಕೂ ಅಧಿಕ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ಕನ್ನಡದ ಏಳಿಗೆಗೆ ಅನ್ಯಾಯವೆಸಗಿರುವ ಕರ್ನಾಟಕ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ನಾಡಿನ ಸಾಹಿತಿಗಳು, ಶಿಕ್ಷಣತಜ್ಜರು ಸೇರಿದಂತೆ ಅನೇಕ ಗಣ್ಯರು ಈ ಹೋರಾಟದ ಬೆಂಬಲಕ್ಕೆ ನಿಂತಿದ್ದಾರೆ ಎಂದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಕಾರ್ಯದರ್ಶಿ ಕೆ.ಈರಣ್ಣ, ಉಪಾಧ್ಯಕ್ಷ ರವಿಕುಮಾರ್, ಸುಜಾತಾ, ಕನುಮಪ್ಪ, ತಿಪ್ಪೇಸ್ವಾಮಿ, ನಾಗರಾಜ್, ರೇಖಾ, ತಿಪ್ಪೇಸ್ವಾಮಿ ಗೋನೂರು, ಮಂಜಣ್ಣಿ ಉಪಸ್ಥಿತರಿದ್ದರು.