ಸಾರಾಂಶ
-ಡಯಟ್‍ನಲ್ಲಿ ಪೂರ್ವಭಾವಿ ಸಭೆಯಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾಹಿತಿ
----ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ(ಎನ್ ಪಿಇಪಿ)ಕಾರ್ಯಕ್ರಮದಡಿ ರಾಜ್ಯಮಟ್ಟದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧೆಗಳನ್ನು ನಗರದ ಮುರುಘಾಮಠದಲ್ಲಿ 22ರಂದು ಆಯೋಜಿಸಲಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ತಿಳಿಸಿದರು.ಡಯಟ್‍ನಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಡಿ.ಎಸ್.ಇ.ಆರ್.ಟಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ, ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ರಾಜ್ಯಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಪ್ರತಿ ಜಿಲ್ಲೆಯಿಂದ 11ರಂತೆ 374 ವಿದ್ಯಾರ್ಥಿಗಳು, 68 ಮೇಲ್ವಿಚಾರಕ ಶಿಕ್ಷಕರನ್ನೊಳಗೊಂಡಂತೆ 442 ಜನ ಭಾಗವಹಿಸುತ್ತಾರೆ ಎಂದರು.
ಜಿಲ್ಲಾ ಎನ್ ಪಿಇಪಿ ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, ಎನ್ ಪಿಇಪಿ ಭಾರತ ಸರ್ಕಾರದ ಧನ ಸಹಾಯ ಪಡೆದ ಮೌಲ್ಯಯುತ ಯೋಜನೆಯಾಗಿದೆ. ಶಾಲೆಗಳಲ್ಲಿ ಶೈಕ್ಷಣಿಕ ಕಲಿಕೆಯೊಂದಿಗೆ ಸಹಪಠ್ಯ ಚಟುವಟಿಕೆಗಳ ಮೂಲಕ ಜೀವನ ಕೌಶಲ್ಯ ಬೆಳೆಸುವ ಸನ್ನಿವೇಶ ಕಲ್ಪಿಸಿ ಜನಸಂಖ್ಯೆ ಮತ್ತು ಸುಸ್ಥಿರ ಅಭಿವೃದ್ಧಿ ನಡುವಿನ ಅಂತರ್ ಸಂಬಂಧದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ.ರಾಷ್ಟ್ರಮಟ್ಟದಲ್ಲಿ ಎನ್ ಸಿಇಆರ್ ಟಿ ಅನುಷ್ಠಾನ ಸಂಸ್ಥೆಯಾಗಿದ್ದು, ರಾಜ್ಯಮಟ್ಟದಲ್ಲಿ ಡಿಎಸ್ಇಆರ್ ಟಿ ಯು ಅನುಷ್ಠಾನ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳಲ್ಲಿ ಮಾತುಗಾರಿಕೆ, ಅಭಿನಯ ಕೌಶಲ್ಯ, ವರ್ತನೆ, ಜೀವನ ಕೌಶಲ್ಯ, ಸಂವೇದನಾಶೀಲತೆ ಬೆಳೆಸಲು ಸ್ಪರ್ಧಾ ಕಾರ್ಯಕ್ರಮ ಸಹಕಾರಿ ಎಂದರು.
ಥೀಮ್ ಆಧಾರಿತ ಸ್ಪರ್ಧೆಗಳಲ್ಲಿ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧೆಗೆ 5 ಥೀಮ್‍ಗಳನ್ನು ನಿಗದಿಪಡಿಸಲಾಗಿದೆ. ಸ್ಪರ್ಧೆಯು ಶಾಲಾ, ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಹಂತಗಳಲ್ಲಿ ನಡೆಯಲಿದ್ದು, ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡ ರಾಜ್ಯ ಹಂತದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಪಾತ್ರಾಭಿನಯ ಸ್ಪರ್ಧೆಗೆ ಪ್ರತಿ ತಂಡದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 9ನೇ ತರಗತಿಯ 4 ರಿಂದ 5 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ.ಜಾನಪದ ನೃತ್ಯ ಸ್ಪರ್ಧೆಯಲ್ಲಿ ಹುಡುಗ, ಹುಡುಗಿಯರಿಗೆ ಅವಕಾಶ, ಮಗುವಿನ ಬೆಳವಣಿಗೆಯಲ್ಲಿ ಅವಿಭಕ್ತ ಕುಟುಂಬದ ಪಾತ್ರ, ಪರಿಸರ ಸಂರಕ್ಷಣೆ, ಮಾದಕ ವಸ್ತುವಿನ ದುರ್ಬಳಕೆ ತಡೆಗಟ್ಟುವಿಕೆ, ಹದಿಹರೆಯದ ಸಮಯದಲ್ಲಿ ಆರೋಗ್ಯಕರ ಸಂಬಂಧ ಥೀಮ್‍ನಲ್ಲಿ ಆಯ್ಕೆ ಮಾಡಿಕೊಂಡು 8 ಮತ್ತು 9 ನೇ ತರಗತಿಯ 4 ರಿಂದ 6 ವಿದ್ಯಾರ್ಥಿಗಳು ಭಾಗವಹಿಸಿ ಸ್ಥಳೀಯ ಭಾಷೆಯಲ್ಲಿ ಪ್ರಸ್ತುತಪಡಿಸಲು ಅವಕಾಶವಿದೆ ಎಂದರು. ಉಪನ್ಯಾಸಕ ಆರ್.ನಾಗರಾಜು ಮಾತನಾಡಿ, ಸ್ಪರ್ಧಾ ಕಾರ್ಯಕ್ರಮಕ್ಕೆ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ವಸತಿ ಸಮಿತಿ, ತೀರ್ಪುಗಾರರ ಸಮಿತಿ, ನೊಂದಣಿ ಸಮಿತಿ ರಚಿಸಿಕೊಂಡಿದ್ದು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಹಂತದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
-----ಫೋಟೊ: ರಾಜ್ಯಮಟ್ಟದ ಎನ್.ಪಿ.ಇ.ಪಿ ಸಹಪಠ್ಯ ಚಟುವಟಿಕೆಗಳಾದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮ ನಡೆಸುವ ಸಂಬಂಧ ಡಯಟ್‍ನಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿದರು.