ಸಾರಾಂಶ
ಒಳ ಮೀಸಲಾತಿ ಕುರಿತು ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿ ಎರಡು ತಿಂಗಳಾದರೂ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಕರ್ನಾಟಕದ ಜಿಲ್ಲಾ ಸಂಘಟನೆ ಸಂಚಾಲಕ ಎಂ.ವಿರುಪಾಕ್ಷಿ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿ ಮಾಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿದ್ದು, ಇದೇ ರೀತಿಯ ವಿಳಂಬ ಧೋರಣೆ ಮುಂದುವರೆದಲ್ಲಿ ಸರ್ಕಾರಕ್ಕೆ ತೀವ್ರವಾಗಿ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಕರ್ನಾಟಕದ ಜಿಲ್ಲಾ ಸಂಘಟನೆ ಸಂಚಾಲಕ ಎಂ.ವಿರುಪಾಕ್ಷಿ ಎಚ್ಚರಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಕುರಿತು ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿ ಎರಡು ತಿಂಗಳಾದರೂ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ 6ನೇ ಗ್ಯಾರಂಟಿಯಾಗಿ ಸದಾಶಿವ ಆಯೋಗ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ 5 ಗ್ಯಾರಂಟಿ ಮಾತ್ರ ಈಡೇರಿಸಿರುವ ಸರ್ಕಾರ 6ನೇ ಗ್ಯಾರಂಟಿ ಜಾರಿಗೊಳಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ ಎಸ್.ಮಾರೆಪ್ಪ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಹರಿಯಾಣ ರಾಜ್ಯ ಸರ್ಕಾರ ಪ್ರಥಮವಾಗಿ ಸಚಿವ ಸಂಪುಟದಲ್ಲಿ ಜಾರಿ ಮಾಡಲು ನಿರ್ಣಯ ಕೈಗೊಂಡಿದಂತೆ ಕರ್ನಾಟಕ ರಾಜ್ಯ ಸರ್ಕಾರ ವಿಳಂಬ ಮಾಡದೇ ಜಾರಿ ಮಾಡಿ ನುಡಿದಂತೆ ನಡೆದುಕೊಳ್ಳಲಿ. ಇಲ್ಲವಾದಲ್ಲಿ ಸಂಡೂರು,ಶಿಗ್ಗಾವಿ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.ಪತ್ರಿಕಾಗೊಷ್ಠಿಯಲ್ಲಿ ಸಂಘಟನೆ ಮುಖಂಡರಾದ ರವೀಂದ್ರ ಜಲ್ದಾರ್, ಜೆ.ಬಿ.ರಾಜು, ತಿಮ್ಮಪ್ಪ ಪಿರಂಗಿ,ಹೇಮರಾಜ್ ಅಸ್ಕಿಹಾಳ, ಭೀಮಣ್ಣ ಮಂಚಾಲ್, ರವಿ, ಸುಭಾಶ್ ಅಸ್ಕಿಹಾಳ, ಸತೀಶ ಇದ್ದರು.