ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆಯಾದ ‘ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್’ (ಎಂಸಿಎಚ್‌ಪಿ) ಆಶ್ರಯದಲ್ಲಿ ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ (ಕೆಎಸ್‌ಎಎಚ್‌ಸಿ) ವತಿಯಿಂದ ‘ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಅಂಡ್ ಹೆಲ್ತ್‌ಕೇರ್ ಪ್ರೊಫೆಷನ್ಸ್’ (ಎನ್‌ಸಿಎಎಚ್‌ಪಿ) ಪಠ್ಯಕ್ರಮ ಅನುಷ್ಠಾನ ಕುರಿತಾದ ರಾಜ್ಯ ಮಟ್ಟದ ಕಾರ್ಯಾಗಾರ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ. ಬಿ. ಎಲ್. ಸುಜಾತಾ ರಾಥೋಡ್, ರಾಜ್ಯದ ಆರೋಗ್ಯ ಶಿಕ್ಷಣವನ್ನು ಜಾಗತಿಕ ಉತ್ತಮ ಗುಣಮಟ್ಟದ ಪದ್ಧತಿಗಳಿಗೆ ಅನುಗುಣವಾಗಿ ರೂಪಿಸಲಾಗುತ್ತಿದೆ. ಈ ಸಾಮರ್ಥ್ಯ ಆಧಾರಿತ ಶಿಕ್ಷಣದಿಂದ ಅಲೈಡ್ ಹೆಲ್ತ್ ಪದವೀಧರರು ಕೇವಲ ಸೈದ್ಧಾಂತಿಕ ಜ್ಞಾನವನ್ನಷ್ಟೇ ಅಲ್ಲದೆ, ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವ ಸ್ಪಷ್ಟ ಮತ್ತು ವೃತ್ತಿಪರ ಕೌಶಲಗಳನ್ನು ಪಡೆಯುತ್ತಾರೆ ಎಂದರು.ಕಾರ್ಯಾಗಾರವನ್ನು ಉದ್ಘಾಟಿಸಿದ ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್‌ ಅವರು, 2026-27ನೇ ಶೈಕ್ಷಣಿಕ ಸಾಲಿನಿಂದ ಕಡ್ಡಾಯವಾಗಿ ಜಾರಿಗೊಳ್ಳಲಿರುವ ''''''''''''''''ಸಾಮರ್ಥ್ಯ ಆಧಾರಿತ ಪಠ್ಯಕ್ರಮ''''''''''''''''ಕ್ಕೆ ರಾಜ್ಯದಾದ್ಯಂತ ಇರುವ ಅಲೈಡ್ ಮತ್ತು ಹೆಲ್ತ್‌ಕೇರ್ ಶಿಕ್ಷಣ ಸಂಸ್ಥೆಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವು ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದರು.

ದೇಶದಲ್ಲಿನ ಅಲೈಡ್ ಹೆಲ್ತ್ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಣಿಪಾಲದ ಎಂಸಿಎಚ್‌ಪಿ ಗುಣಮಟ್ಟದ ಶಿಕ್ಷಣ ಮತ್ತು ಪ್ರಾಯೋಗಿಕ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಲ್ಲದೆ, ಶೈಕ್ಷಣಿಕ ಶ್ರೇಷ್ಠತೆ, ನಿಯಂತ್ರಕ ಮಾನದಂಡಗಳ ಪಾಲನೆ ಮತ್ತು ಆರೋಗ್ಯ ಶಿಕ್ಷಣದಲ್ಲಿ ಸಾಮರ್ಥ್ಯ ವೃದ್ಧಿಗೆ ಮಾಹೆ ಸದಾ ಒತ್ತು ನೀಡುತ್ತಿದೆ ಎಂದರು.

ಗೌರವ ಅತಿಥಿಗಳಾಗಿ ಮಾಹೆ ಕುಲಪತಿ ನಿವೃತ್ತ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಕೆಎಸ್‌ಎಎಚ್‌ಸಿ ಅಧ್ಯಕ್ಷ ಪ್ರೊ. ಯು. ಟಿ. ಇಫ್ತಿಕಾರ್ ಅಲಿ ಫರೀದ್ ಮತ್ತು ಯೆನೆಪೋಯ ವಿವಿಯ ಕುಲಪತಿ ಡಾ. ಗಂಗಾಧರ ಸೋಮಯಾಜಿ ಭಾಗವಹಿಸಿದ್ದರು. ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಡಾ. ಶರತ್ ಕುಮಾರ್ ರಾವ್, ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ. ಶ್ರೀನಿವಾಸ್ ಮೂರ್ತಿ ಎಸ್.ಟಿ., ಮಾಹೆ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಮತ್ತು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ ಡೀನ್ ಆದ ಡಾ. ಜಿ. ಅರುಣ್ ಮಯ್ಯ ಉಪಸ್ಥಿತರಿದ್ದರು.ಕರ್ನಾಟಕದಾದ್ಯಂತ ಅಲೈಡ್ ಮತ್ತು ಹೆಲ್ತ್‌ಕೇರ್ ವೃತ್ತಿಪರರಿಗೆ ಏಕರೂಪದ ಮಾನದಂಡಗಳು ಮತ್ತು ಉತ್ತಮ ಗುಣಮಟ್ಟದ ತರಬೇತಿಯನ್ನು ಖಚಿತಪಡಿಸಿಕೊಳ್ಳಲು, ಎನ್‌ಸಿಎಎಚ್‌ಪಿ ಪಠ್ಯಕ್ರಮವನ್ನು ಎಲ್ಲೆಡೆ ಜಾರಿಗೆ ತರುವ ನಿರ್ಧಾರದೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು.