ಕೇಂದ್ರ ಸರ್ಕಾರದ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿ ಹೊಮ್ಮಿದೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ರಫ್ತು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಹೆಚ್ಚಿನ ಬೆಂಬಲ ನೀಡುವ ಅಗತ್ಯವಿದೆ ಎಂದು ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ರಫ್ತು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಹೆಚ್ಚಿನ ಬೆಂಬಲ ನೀಡುವ ಅಗತ್ಯವಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಮಾತನಾಡಿದರು.
ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳ ಅಧಿಕೃತೀಕರಣ ಯೋಜನೆ(ಪಿಎಂಎಫ್‌ಎಂಇ) ಸೇರಿ ಕೇಂದ್ರ ಯೋಜನೆಗಳಡಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಮುಂದಿನ ಹಂತದ ಅಭಿವೃದ್ಧಿಗೆ ಆಹಾರ ಪಾರ್ಕ್, ಕೋಲ್ಡ್ ಸ್ಟೋರೇಜ್, ಸಾರಿಗೆ ವ್ಯವಸ್ಥೆ, ಬ್ರ್ಯಾಂಡಿಂಗ್ ಮತ್ತು ರಫ್ತು ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಕೇಂದ್ರದ ನೆರವಿನ ಅಗತ್ಯವಿದೆ. ರೈತರನ್ನು ಕೃಷಿ ಉದ್ಯಮಿಗಳಾಗಿ ರೂಪಿಸಲು, ದೇಶದ ಕೃಷಿ ಆರ್ಥಿಕತೆ ಬಲಪಡಿಸಲು ಕೇಂದ್ರ-ರಾಜ್ಯಗಳ ಸಮನ್ವಯ ಅತ್ಯಂತ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕದ 25ಕ್ಕೂ ಅಧಿಕ ಕೃಷಿ ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ(ಜಿಐ) ಮಾನ್ಯತೆ
ಕರ್ನಾಟಕದ 25ಕ್ಕೂ ಅಧಿಕ ಕೃಷಿ ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ(ಜಿಐ) ಮಾನ್ಯತೆ ದೊರೆತಿದೆ. ಕಲಬುರಗಿ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ತೊಗರಿ ಬೇಳೆಗೆ ‘ಭೀಮಾ ಪಲ್ಸ್’ ಬ್ರಾಂಡ್ ಮತ್ತು ತೋಟಗಾರಿಕಾ ಇಲಾಖೆಯ ‘ಜೆಂಕರ್’ ಜೇನು ಬ್ರ್ಯಾಂಡಿಂಗ್ ಇದಕ್ಕೆ ಉದಾಹರಣೆಗಳಾಗಿವೆ. 2022–23ರಲ್ಲಿ ಕರ್ನಾಟಕವು ₹36 ಕೋಟಿ ಮೌಲ್ಯದ ಸುಮಾರು 8 ಸಾವಿರ ಟನ್ ಸಿರಿಧಾನ್ಯ ಮತ್ತು ಸಿರಿಧಾನ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದು ದೇಶದ ಒಟ್ಟು ಸಿರಿಧಾನ್ಯ ರಫ್ತಿನ ಸುಮಾರು ಶೇ.40 ಆಗಿದೆ. ರಾಜ್ಯದ ಸಿರಿಧಾನ್ಯ ಉತ್ಪನ್ನಗಳು ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಕತಾರ್, ಯುಎಇ, ಥೈಲ್ಯಾಂಡ್ ಮತ್ತು ಸಿಂಗಾಪುರ ದೇಶಗಳಿಗೆ ರಫ್ತಾಗುತ್ತಿವೆ ಎಂದು ವಿವರಿಸಿದರು.
ಪಿಎಂಎಫ್‌ಎಂಇಯಲ್ಲಿ ಮೊದಲ ಸ್ಥಾನ
ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳ ಅಧಿಕೃತೀಕರಣ ಯೋಜನೆ(ಪಿಎಂಎಫ್‌ಎಂಇ) ಜಾರಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಯೋಜನೆಗೆ ಕೃಷಿ ಇಲಾಖೆ ನೋಡಲ್ ಇಲಾಖೆಯಾಗಿದ್ದು, ಕೆಪೆಕ್ ನೋಡಲ್ ಏಜೆನ್ಸಿಯಾಗಿದೆ. ಮೈಸೂರಿನ ಸಿಎಫ್‌ಟಿಆರ್‌ಐ ತಂತ್ರಜ್ಞಾನ ಸಹಭಾಗಿಯಾಗಿ ಕಾರ್ಯನಿರ್ವಹಿಸುತ್ತಿದೆ. ಯೋಜನೆಯಡಿ 500ಕ್ಕೂ ಅಧಿಕ ರೈತರಿಗೆ ಕೃಷಿ ಉದ್ಯಮಿಗಳಾಗಿ ತರಬೇತಿ ನೀಡಲಾಗಿದೆ. 2020-21ರಿಂದ ಈವರೆಗೆ 8,800 ಫಲಾನುಭವಿಗಳಿಗೆ ₹1,075 ಕೋಟಿ ಸಾಲ ಮಂಜೂರಾಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಎಂದು ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸ್ಕರಣೆಗೆ ಮೊದಲ ಆದ್ಯತೆ:
ಚೌಹಾಣ್ ಅವರು ಕರ್ನಾಟಕದ ಪ್ರಸ್ತಾಪಗಳಿಗೆ ಸದಾ ಬೆಂಬಲ ನೀಡಿದ್ದು, ರಾಜ್ಯದ ಕೃಷಿ ಸಾಧನೆಗಳನ್ನು ಮೆಚ್ಚಿಕೊಂಡಿದ್ದಾರೆ. ಕರ್ನಾಟಕವು ದೇಶದಲ್ಲೇ ಸಾವಯವ ಕೃಷಿ, ಸಿರಿಧಾನ್ಯಗಳು ಮತ್ತು ಆಹಾರ ಸಂಸ್ಕರಣೆಗೆ ಮೊದಲ ಆದ್ಯತೆ ನೀಡಿದ ರಾಜ್ಯವಾಗಿದೆ. 10 ವಿಭಿನ್ನ ಕೃಷಿ-ಹವಾಮಾನ ವಲಯಗಳನ್ನು ಹೊಂದಿರುವ ರಾಜ್ಯದ ವೈವಿಧ್ಯತೆ, ಸಿರಿಧಾನ್ಯಗಳು, ಕಾಫಿ, ರೇಷ್ಮೆ, ಸಣ್ಣ ಸೌತೆಕಾಯಿ, ಸೌತೆಕಾಯಿ, ಮಸಾಲೆ ಪದಾರ್ಥಗಳು, ತರಕಾರಿಗಳು ಹಾಗೂ ಸಂಸ್ಕರಿಸಿದ ಹಣ್ಣು-ತರಕಾರಿಗಳ ಉತ್ಪಾದನೆ ಮತ್ತು ರಫ್ತಿನಲ್ಲಿ ಕರ್ನಾಟಕವನ್ನು ಪ್ರಮುಖ ಕೇಂದ್ರವನ್ನಾಗಿ ರೂಪಿಸಿವೆ ಎಂದು ಬಣ್ಣಿಸಿದರು.
