ಕರುನಾಡಿನ ಸೆರೆಮನೆಗಳಲ್ಲಿ ಕಾಂಚಾಣ ಕುಣಿತಕ್ಕೆ ನಿರ್ಬಂಧ ಹಾಕಲು ಮುಂದಾಗಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆ, ಈಗ ಜೈಲಿನ ಕ್ಯಾಂಟೀನ್‌ಗಳಲ್ಲಿ ಕೈದಿಗಳಿಗೆ ಮಾಸಿಕ 5 ಸಾವಿರ ರು. ಮಿತಿಯಲ್ಲಿ ‘ನಗದು ರಹಿತ (ಕ್ಯಾಶ್‌ಲೆಸ್)’ ವ್ಯವಸ್ಥೆ ಜಾರಿಗೊಳಿಸಿದೆ.
ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುಕರುನಾಡಿನ ಸೆರೆಮನೆಗಳಲ್ಲಿ ಕಾಂಚಾಣ ಕುಣಿತಕ್ಕೆ ನಿರ್ಬಂಧ ಹಾಕಲು ಮುಂದಾಗಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆ, ಈಗ ಜೈಲಿನ ಕ್ಯಾಂಟೀನ್‌ಗಳಲ್ಲಿ ಕೈದಿಗಳಿಗೆ ಮಾಸಿಕ 5 ಸಾವಿರ ರು. ಮಿತಿಯಲ್ಲಿ ‘ನಗದು ರಹಿತ (ಕ್ಯಾಶ್‌ಲೆಸ್)’ ವ್ಯವಸ್ಥೆ ಜಾರಿಗೊಳಿಸಿದೆ.
ಅಂತೆಯೇ ಜೈಲಿನ ಆವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಿ ಬೆರಳು ಮುದ್ರೆ (ಥಂಬಿಂಗ್) ಹಾಗೂ ಮುಖ ಚಹರೆ (ಫೇಶಿಯಲ್) ನೀಡಿ ತಾವು ಬಯಸಿದ ವಸ್ತುಗಳನ್ನು (ನಿಷೇಧಿತ ವಸ್ತುಗಳು ಹೊರತುಪಡಿಸಿ) ಕೈದಿಗಳು ಖರೀದಿಸಬಹುದಾಗಿದೆ. ಇದಕ್ಕಾಗಿ ಹಣ ನೇರವಾಗಿ ಕೈದಿಗಳ ಖಾತೆಯಿಂದ ಕಾರಾಗೃಹ ಇಲಾಖೆಗೆ ವರ್ಗಾವಣೆಯಾಗಲಿದೆ.ಕಾರಾಗೃಹಗಳಲ್ಲಿ ಕಳ್ಳ ಹಾದಿಯಲ್ಲಿ ಹಣ ಹರಿದು ಬಂದು ಕಾನೂನುಬಾಹಿರ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಹಣಕಾಸು ಅಕ್ರಮಗಳಿಗೆ ಕಡಿವಾಣ ಹಾಕಲು ಯೋಜಿಸಿದ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲುಗಳಲ್ಲಿ ‘ನಗದು ರಹಿತ ವ್ಯವಸ್ಥೆ’ ಅನುಷ್ಠಾನಗೊಳಿಸಲು ಹೆಜ್ಜೆಯಿಟ್ಟಿದ್ದಾರೆ.
ಮೊದಲ ಹಂತದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕ್ಯಾಂಟೀನ್ ಕ್ಯಾಶ್‌ಲೆಸ್ ವ್ಯವಸ್ಥೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಬಳಿಕ ಹಂತ ಹಂತವಾಗಿ ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ನಗದುರಹಿತ ವ್ಯವಸ್ಥೆಗೆ ಕೈದಿಗಳಿಂದ ಸಹ ಉತ್ತಮ ಪ್ರತಿಕ್ರಿಯೆ ಬಂದಿದೆ. ಆರ್ಥಿಕ ವಹಿವಾಟು ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ. ಯಾವುದೇ ಅಕ್ರಮಗಳಿಗೆ ಅವಕಾಶ ಸಹ ಇರುವುದಿಲ್ಲ. ಕೈದಿಗಳ ಪ್ರತಿ ಪೈಸೆಗೂ ಲೆಕ್ಕ ಸಿಗುತ್ತದೆ ಎಂದು ಡಿಜಿಪಿ ಅಭಿಪ್ರಾಯಪಟ್ಟಿದ್ದಾರೆ.ಹೇಗೆ ವ್ಯವಸ್ಥೆ ?:
ಕಾರಾಗೃಹದ ಕ್ಯಾಂಟೀನ್‌ಗಳಲ್ಲಿ ಹಣ್ಣು, ಒಣ ಹಣ್ಣು (ಡ್ರೈ ಪ್ರೂಟ್ಸ್), ತರಕಾರಿ, ಖಾದ್ಯ ತಿನಿಸುಗಳು, ಬ್ರೆಡ್, ಬಿಸ್ಕೆಟ್ಸ್, ಚಾಕೊಲೋಟ್ ಹಾಗೂ ಸೋಪು ಹೀಗೆ ಕೆಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಕ್ಯಾಂಟೀನ್‌ಗಳಲ್ಲಿ ಲಭ್ಯವಿರುವ ವಸ್ತುಗಳನ್ನು ತಾವೇ ಆರಿಸಿಕೊಂಡು ಕೈದಿಗಳು ಖರೀದಿಸಬಹುದು. ಮೊದಲು ನಗದು ನೀಡಿ ಕೈದಿಗಳು ವ್ಯವಹಾರ ನಡೆಸುತ್ತಿದ್ದರು. ಈ ಆರ್ಥಿಕ ವಹಿವಾಟಿನ ಪ್ರಾಮಾಣಿಕತೆ ಬಗ್ಗೆ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕೈದಿಗಳಿಂದ ‘ಹೆಚ್ಚುವರಿ’ ಹಣ ವಸೂಲಿ ಮಾಡಿ ಅವರಿಗೆ ಬೇಕಾದ ವಸ್ತುಗಳನ್ನು ಕಾರಾಗೃಹದ ಕೆಲ ಸಿಬ್ಬಂದಿ ಪೂರೈಸುತ್ತಾರೆ. ಅಲ್ಲದೆ ಕೈದಿಗಳ ಪೋಷಕರು, ಕುಟುಂಬದವರು ನೀಡುವ ಹಣವನ್ನು ಕೆಲವರು ಗುಳುಂ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆಪಾದನೆಗಳಿಗೆ ಪೂರ್ಣ ವಿರಾಮ ಹಾಕಿ ಜೈಲು ಕ್ಯಾಂಟೀನ್‌ಗಳಲ್ಲಿ ಹಣದ ವ್ಯವಹಾರವನ್ನು ಪಾರದರ್ಶಕಗೊಳಿಸಲು ಇಲಾಖೆ ಇದೀಗ ನಿರ್ಧರಿಸಿದೆ.ಅಂತೆಯೇ ಜೈಲುಗಳ ಕ್ಯಾಂಟೀನ್‌ಗಳಲ್ಲಿ ನಗದು ರಹಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕ್ಯಾಂಟೀನ್‌ನಲ್ಲಿ ವಸ್ತು ಖರೀದಿಸುವಾಗ ಕೈದಿಗಳು ಥಂಬಿಂಗ್ ಹಾಗೂ ಫೇಶಿಯಲ್ ರೆಕಗ್ನೇಷನ್ ಮೂಲಕ ವ್ಯವಹರಿಸಬಹುದು. ಪ್ರತಿ ತಿಂಗಳು 5 ಸಾವಿರ ರು. ಅನ್ನು ನಿಗದಿಗೊಳಿಸಲಾಗಿದ್ದು. ಇಷ್ಟು ಹಣದಲ್ಲಿ ಅವರು ವಹಿವಾಟು ನಡೆಸಬೇಕು. ಬಳಿಕ ಆ ಹಣವು ಕೈದಿಗಳ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
-ಬಾಕ್ಸ್-ಕೈದಿಗಳ ಖಾತೆಗೆ ಹಣ
ಜೈಲಿನ ಎಲ್ಲ ಕೈದಿಗಳಿಗೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲಾಗಿದ್ದು, ತಿಂಗಳ ಖರ್ಚಿಗೆ ಅವರ ಪೋಷಕರು ಹಣ ವರ್ಗಾವಣೆ ಮಾಡಬಹುದು. ಅಲ್ಲದೆ ಜೈಲಿನಲ್ಲಿ ಶ್ರಮದಾನದಲ್ಲಿ ಸಂಪಾದಿಸಿದ ದಿನಗೂಲಿ ಹಣವನ್ನೂ ಕೈದಿಗಳು ವ್ಯಯಿಸಬಹುದು.ಕೈದಿಗಳಿಗೆ ಎಟಿಎಂ ಕಾರ್ಡ್ ಕೊಡುವುದಿಲ್ಲ. ಕಾರಾಗೃಹದ ಅಧಿಕಾರಿಗಳ ಬಳಿ ಅವರ ಬ್ಯಾಂಕ್ ಪಾಸ್ ಬುಕ್ ಇರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
-ಕೋಟ್-ಜೈಲುಗಳ ಕ್ಯಾಂಟೀನ್‌ಗಳಲ್ಲಿ ಅಕ್ರಮಗಳ ತಡೆಗೆ ‘ನಗದು ರಹಿತ’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈಗ ಕೈದಿಗಳ ಪ್ರತಿ ಪೈಸೆ ಖರ್ಚಿಗೂ ಲೆಕ್ಕ ಸಿಗಲಿದೆ.
-ಅಲೋಕ್ ಕುಮಾರ್, ಡಿಜಿಪಿ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ