ಈ ವರ್ಷದಿಂದಲೇ ಎಸ್‌ಇಪಿಜಾರಿಗೆ ರಾಜ್ಯದಿಂದ ಸಿದ್ದತೆ

| N/A | Published : May 18 2025, 11:59 PM IST / Updated: May 19 2025, 09:27 AM IST

ಸಾರಾಂಶ

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾಗಿ ರಚಿಸಿರುವ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ವರದಿ ಸಿದ್ಧವಾಗಿದ್ದು 2025-26ನೇ ಶೈಕ್ಷಣಿಕ ಸಾಲಿನಿಂದ ಉನ್ನತ ಶಿಕ್ಷಣದಲ್ಲಿ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

 ಬೆಂಗಳೂರು : ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾಗಿ ರಚಿಸಿರುವ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ವರದಿ ಸಿದ್ಧವಾಗಿದ್ದು 2025-26ನೇ ಶೈಕ್ಷಣಿಕ ಸಾಲಿನಿಂದ ಉನ್ನತ ಶಿಕ್ಷಣದಲ್ಲಿ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಬಗ್ಗೆ ಮಾಸಾಂತ್ಯದೊಳಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈಗಾಗಲೇ ಎಸ್‌ಇಪಿ ಕರಡು ರಚನಾ ಸಮಿತಿಯು ನೀಡಿರುವ ಮಧ್ಯಂತರ ವರದಿ ಹಿನ್ನೆಲೆಯಲ್ಲಿ 2024-25ನೇ ಸಾಲಿನಿಂದಲೇ ಎನ್‌ಇಪಿ ಅಡಿ 4 ವರ್ಷಗಳಿಗೆ ಹೆಚ್ಚಿಸಲಾಗಿದ್ದ ಪದವಿ ವ್ಯಾಸಂಗದ ಅವಧಿಯನ್ನು ಮರಳಿ 3 ವರ್ಷಗಳಿಗೆ ಇಳಿಸಲಾಗಿದೆ. ಬಹುಶಿಸ್ತೀಯ ಅಧ್ಯಯನ ವ್ಯವಸ್ಥೆಗೂ ಕೊಕ್‌ ನೀಡಲಾಗಿದೆ. ಇದೀಗ ಈ ಸಮಿತಿಯು ತನ್ನ ಅಂತಿಮ ವರದಿಯನ್ನು ಇಂಗ್ಲೀಷ್‌ನಲ್ಲಿ ಸಿದ್ಧಪಡಿಸಿದೆ. ಇದನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಅಂತಿಮ ಹಂತದಲ್ಲಿದ್ದು ಈ ತಿಂಗಳ ಕೊನೆಯ ವಾರದಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ.

ಈ ಸಂಬಂಧ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್‌ ಅವರು, ರಾಜ್ಯ ಶಿಕ್ಷಣ ನೀತಿ ಸಿದ್ದವಾಗಿದ್ದು 2025-26ರನೇ ಸಾಲಿನಿಂದ ಜಾರಿಗೆ ಚಿಂತನೆ ನಡೆದಿದೆ. ಆಯೋಗ ಅಂತಿಮ ವರದಿಯನ್ನು ಸಿದ್ಧಪಡಿಸಿದೆ. ಅದನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸವೂ ಬಹುತೇಕ ಮುಗಿಯುವ ಹಂತದಲ್ಲಿದೆ. ಅನುವಾದ ನಿಖರವಾಗಿರಬೇಕು. ಹಾಗಾಗಿ ಸಮಿತಿ ಸಮಯ ಕೇಳಿದೆ. ಮೇ 25ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ದೇಶದಲ್ಲೇ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿ ಮಾಡಿತ್ತು. ಇದರಿಂದ ಪದವಿ ವ್ಯಾಸಂಗದ ಅವಧಿ 4 ವರ್ಷಗಳಿಗೆ ಹೆಚ್ಚಳ, ಬಹುಶಿಸ್ತೀಯ ಅಧ್ಯಯನ ಸೇರಿದಂತೆ ಹಲವು ಬದಲಾವಣೆಗಳು ಉನ್ನತ ಶಿಕ್ಷಣದಲ್ಲಿ ಜಾರಿಯಾಗಿದ್ದವು. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎನ್‌ಇಪಿಯನ್ನು ಅವೈಜ್ಞಾನಿಕವಾಗಿ ಹಾಗೂ ಆತುರದಿಂದ ಜಾರಿಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ಬಂದ ದೂರುಗಳ ಹಿನ್ನೆಲೆಯಲ್ಲಿ ಎನ್‌ಇಪಿಗೆ ಬದಲಾಗಿ ಎಸ್‌ಇಪಿ ರಚಿಸಿ ಜಾರಿಗೊಳಿಸುವ ಭರವಸೆ ನೀಡಿತ್ತು.

Read more Articles on