ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿಯಲ್ಲಿ ಹೋರಾಟನಿರತ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದವರು ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ ಪ್ರತಿಭಟನೆ ಹಮ್ಮಿಕೊಂಡಿದ್ದರು.ರೈತರನ್ನು ಕೂಲ್ಲುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ನಿಲ್ಲಲಿ ನಿಲ್ಲಲಿ ಪೊಲೀಸ್ ದೌರ್ಜನ್ಯ ನಿಲ್ಲಲಿ, ರೈತ ದ್ರೋಹಿ ಕೇಂದ್ರ ಸರ್ಕಾರಕ್ಕೆ ಚುನಾವಣೆಯಲ್ಲಿ ಮರಣ ಶಾಸನ ಬರೆಯುತ್ತೇವೆ, ಎಂಪಿಗಳಿಗೆ ಹಳ್ಳಿಗಳ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಈ ವೇಳೆ ಪೊಲೀಸರು ಅಣಕು ಶವ ಕಿತ್ತುಕೊಳ್ಳಲು ಮುಂದಾದರೂ ಅದಕ್ಕೆ ರೈತರು ಅವಕಾಶ ನೀಡಲಿಲ್ಲ.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ದೆಹಲಿಯಲ್ಲಿ ರೈತರು ಬಿಕ್ಷೆ ಬೇಡುತ್ತಿಲ್ಲ, ಸರ್ಕಾರವೇ ನಿಗದಿ ಮಾಡುವ ಬೆಂಬಲ ಬೆಲೆ ಖಾತರಿ ಕಾನೂನು ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ 23 ಬೆಳೆಗಳಿಗೆ ಎಂಎಸ್ ಪಿ ಬೆಲೆ ನಿಗದಿ ಮಾಡಿ, ದೇಶದ ರೈತರನ್ನ ಕತ್ತಲಲ್ಲಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಸಾಲ ಸಂಪೂರ್ಣ ಮನ್ನಾ, ಸ್ವಾಮಿನಾಥನ್ ವರದಿ ಬೆಂಬಲ ಬೆಲೆ, ಡಬ್ಲ್ಯೂಟಿ ಓ ಒಪ್ಪಂದದಿಂದ ಭಾರತ ಸರ್ಕಾರ ಹೊರಗೆ ಬರಬೇಕು, ರೈತರಿಗೆ ಪಿಂಚಣಿ ನೀಡುವ ಯೋಜನೆ, ಫಸಲ್ ಬೀಮಾ, ಬೆಳೆ ವಿಮೆ ಪದ್ಧತಿ ಬದಲಾಗಬೇಕು. ಸರ್ಕಾರವೇ ನಿಗದಿ ಮಾಡುವ ಬೆಲೆಗೆ ಶಾಸನಬದ್ಧ ಖಾತರಿಗಾಗಿ ಹೋರಾಟ ಮಾಡುವ ರೈತರ ಮೇಲೆ ಆಶ್ರುವಾಯು ಸಿಡಿಸಿ ರೈತರನ್ನು ಕೊಲೆಗೆ ಯತ್ನಿಸಲಾಗುತ್ತಿದೆ. ರೈತ ಹೋರಾಟಗಾರರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಖಲಿಸ್ತಾನಿಗಳು ಎಂದು ಹೇಳಿ ರೈತ ಹೋರಾಟಗಾರರ ಮೇಲೆ ರಬ್ಬರ್ ಬುಲೆಟ್, ಆಶ್ರುವಾಯು ಸಿಡಿಸಿದರು. ದೇಶದ ಜನರಿಗೆ ಆಹಾರ ನೀಡುವ ಅನ್ನದಾತರ ಮೇಲಿನ ದೌರ್ಜನ್ಯವೆಸಗಿದ ಕೇಂದ್ರ ಸರ್ಕಾರದ ವಿರುದ್ಧ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.
ಕಳೆದ ವರ್ಷ ದೆಹಲಿ ರೈತ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ಸರ್ಕಾರದ ನೆರವು, ಕುಟುಂಬದ ಒಬ್ಬರಿಗೆ ನೌಕರಿ ನೀಡಬೇಕು ಎಂಬ ಒತ್ತಾಯಗಳನ್ನು ಮಂಡಿಸಲಾಗಿದೆ. ಕೇಂದ್ರ ಸರ್ಕಾರ ರೈತ ಚಳವಳಿಯನ್ನು ದಿಕ್ಕು ತಪ್ಪಿಸಲು ವಾಮಮಾರ್ಗಗಳನ್ನು ಬಳಸುತ್ತಿದೆ ಎಂದು ಅವರು ಕಿಡಿಕಾರಿದರು.ಕೇಂದ್ರ ಸರ್ಕಾರದ ಜೊತೆ ಈಗ 4ನೇ ಸುತ್ತಿನ ಮಾತುಕತೆ ನಡೆದಿದೆ. ಮಾತುಕತೆ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುವುದನ್ನು ಬಿಟ್ಟು ಸಮಸ್ಯೆ ಬಗೆರಿಸಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ್, ರಾಜಸ್ಥಾನ್ ದ ಲಕ್ಷಾಂತರ ರೈತರು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯುವ ತನಕ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ತಿಳಿಸಿದರು.
ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಪಿ. ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ, ವೆಂಕಟೇಶ್, ನೀಲಕಂಠಪ್ಪ, ಕುರುಬೂರು ಸಿದ್ದೇಶ್, ದೇವನೂರು ವಿಜೇಂದ್ರ, ನಂಜದೇವನಪುರ ಸತೀಶ್, ಹೆಗ್ಗೂರು ರಂಗರಾಜ್, ಕುರುಬೂರು ಪ್ರದೀಪ್, ಉಡಿಗಾಲ ಸುಂದರಪ್ಪ, ಕಾಟೂರು ಮಾದೇವಸ್ವಾಮಿ, ನಾಗೇಶ್, ಶ್ರೀಕಂಠ, ಪ್ರಸಾದ್ ನಾಯಕ್, ನಿಂಗರಾಜು, ಮಂಜುನಾಥ್, ಅಪ್ಪಣ್ಣ, ಕೋಟೆ ಸುನೀಲ್, ಬನ್ನೂರು ಸೂರಿ ಮೊದಲಾದವರು ಇದ್ದರು.ಹಲಿ ಹೋರಾಟವನ್ನು ಬೆಂಬಲಿಸಿ ಫೆ.23 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಒತ್ತಾಯ ಪತ್ರ ಸಲ್ಲಿಸಲಾಗುತ್ತದೆ. ಫೆ.26 ರಂದು ಲೋಕಸಭಾ ಸದಸ್ಯರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು. ಮಾ.1 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುವುದು.
- ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ