ಸಾರಾಂಶ
ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡಿದ ವಿಚಾರ ಗುರುವಾರ ಸದನದಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಪರ ವಿರೋಧ ವಾಗ್ವಾದಕ್ಕೆ ಕಾರಣವಾಯಿತು.
ಕನ್ನಡಪ್ರಭ ವಾರ್ತೆ ವಿಧಾನಸಭೆ
ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡಿದ ವಿಚಾರ ಗುರುವಾರ ಸದನದಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಪರ ವಿರೋಧ ವಾಗ್ವಾದಕ್ಕೆ ಕಾರಣವಾಯಿತು.ವಿಪಕ್ಷ ನಾಯಕ ಆರ್.ಅಶೋಕ್ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ, ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳುವ ಕಾಂಗ್ರೆಸ್‌ನವರು, ರಾಹುಲ್ ಗಾಂಧಿ ಹೇಳಿದರೆಂದು ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹15 ಲಕ್ಷ ಪರಿಹಾರವನ್ನು ನಮ್ಮ ಸರ್ಕಾರದಿಂದ ಕೊಟ್ಟಿದ್ದಾರೆ. ನಮ್ಮ ತೆರಿಗೆ ರಾಹುಲ್‌ಗಾಂಧಿ ಅವರ ವಯನಾಡು ಕ್ಷೇತ್ರಕ್ಕೆ ಹೋಗಿದೆ. ಇದು ಯಾರ ಹಕ್ಕು? ಮುಂದೆಯೂ ಕೇರಳ, ತಮಿಳುನಾಡು ಇನ್ನಿತರೆ ರಾಜ್ಯಗಳಲ್ಲಿ ಆನೆ ದಾಳಿಗೆ ಮೃತಪಟ್ಟವರಿಗೆ ಕಾಂಗ್ರೆಸ್ ಸರ್ಕಾರವೇ ಪರಿಹಾರ ಕೊಡುತ್ತಾ ಎಂದು ಪ್ರಶ್ನಿಸಿದರು.
ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ, ಮಾನವೀಯ ನೆಲೆಯಲ್ಲಿ ಈ ಪರಿಹಾರ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಅಶೋಕ್, ಕನಕಪುರ ತಾಲೂಕಿನ ಪುಟ್ಟನಂಜಯ್ಯ ಅವರು ಆನೆಯಿಂದ ಮೃತಪಟ್ಟಿದ್ದು, ಅವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಿಮ್ಮದು ಯಾವ ಸೀಮೆ ಮಾನವೀಯತೆ. ನಮ್ಮ ಮನೆಯಲ್ಲಿ ಹಣವಿದ್ದು ಹೆಚ್ಚುವರಿಯಾದರೆ ಮಾತ್ರ ಹಾಗೆ ಮಾನವೀಯತೆಯಿಂದ ನೀಡಬೇಕು ಎಂದರು.