ಭಾರತದಲ್ಲಿ 700 ಬುಡಕಟ್ಟು ಜನಾಂಗಗಳಿಗೆ ಕರ್ನಾಟಕದಲ್ಲಿ ಸುಮಾರು 50 ಬುಡಕಟ್ಟು ಪಂಗಡಗಳಿವೆ. ಕರ್ನಾಟಕದ ಜನಸಂಖ್ಯೆಗೆ ಶೇ. 7 ಬುಡಕಟ್ಟು ಜನರಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರುಕಾಡಿನ ಮೂಲಭೂತ ಹಕ್ಕುದಾರರಾದ ಬುಡಕಟ್ಟು ಜನರನ್ನು ಸ್ಮಧಾರಣೆಯ ನೆಪದಲ್ಲಿ ಒಕ್ಕಲೆಬ್ಬಿಸಿ ಮ್ಯೂಸಿಯಂನ ಚಿತ್ರಗಳನ್ನಾಗಿ ಮಾಡಬಾರದು ಎಂದು ರಾಜ್ಯ ಪ್ರವಾಸೋದ್ಯಮ ಪ್ರಶಸ್ತಿ ವಿಜೇತ ಡಾ.ಎಸ್.ಪಿ. ಪದ್ಮ ಪ್ರಸಾದ್ ಹೇಳಿದರು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ನಡೆದ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಕರ್ನಾಟಕ ರಾಜ್ಯ ಪ. ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಡಕಟ್ಟು ಪ್ರದೇಶಗಳಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು ಹಾಗೂ ಸಂರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಮತೋಲನಗೊಳಿಸುವ ಬಗ್ಗೆ ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದಲ್ಲಿ 700 ಬುಡಕಟ್ಟು ಜನಾಂಗಗಳಿಗೆ ಕರ್ನಾಟಕದಲ್ಲಿ ಸುಮಾರು 50 ಬುಡಕಟ್ಟು ಪಂಗಡಗಳಿವೆ. ಕರ್ನಾಟಕದ ಜನಸಂಖ್ಯೆಗೆ ಶೇ. 7 ಬುಡಕಟ್ಟು ಜನರಿದ್ದಾರೆ. ಬುಡಕಟ್ಟು ಜನರು ಇರುವ ರೀತಿಯಲ್ಲೆ ಬಿಟ್ಟು ಅವರಿಗೆ ವಿದ್ಯಾಭ್ಯಾಸ, ಆರೋಗ್ಯ, ಸಂಪರ್ಕ ಸಾಧನೆಗಳನ್ನು ಒದಗಿಸಿಕೊಡಬೇಕು. ಅಭಿವೃದ್ಧಿ ಹೇಗೆ ಎನ್ನುವುದನ್ನು ಅವರಿಂದ ನಾವು ಕಲಿಯಬೇಕು. ಆದರೆ ಅಭಿವೃದ್ಧಿಯನ್ನು ಅವರಿಗೆ ನಾವು ಹೇಳಿಕೊಡುತ್ತಿದ್ದೇವೆ. ಬುಡಕಟ್ಟು ಜನರಿಗೆ ಅಪೂರ್ವವಾದ ಜ್ಞಾನವಿದ್ದು, ಗಿಡಗಳ ಬಗ್ಗೆ ಬೀಜಗಳ ಬಗ್ಗೆ ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ, ಅರಣ್ಯ ಇಲಾಖೆಯವರಿಗಿಂತ ಹಾಗೂ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗಿಂತ ಹೆಚ್ಚಿಗೆ ತಿಳಿದುಕೊಂಡಿದ್ದಾರೆ ಎಂದರು. ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಚಂದ್ರಶೇಖರ ಮಾತನಾಡಿ, ನಮಗೆ ಪ್ರವಾಸದ ಕಲ್ಪನೆಯೇ ಇರಲಿಲ್ಲ. ನಾವು ಹಿಂದೆ ಜಾತ್ರೆ, ಮದುವೆ, ನೆಂಟರ ಮನೆಗಳಿಗೆ ಹೋಗುತಿದ್ದೆವು. ಅದೇ ನಮಗೆ ಪ್ರವಾಸವಾಗುತ್ತಿತ್ತು. ನಮ್ಮ ಆರೋಗ್ಯವು ಪರಿಸರದ ಮೇಲೆ ಅವಲಂಬಿತವಾಗಿದೆ. ಬುಡಕಟ್ಟು ಜನರ ನೆಮ್ಮದಿಯನ್ನು ಆಸ್ತಿಯನ್ನು ಜೀವನವನ್ನು ನಾವು ಕಸಿದುಕೊಳ್ಳುತ್ತಿದ್ದೇವೆಯೇ? ಶೋಷಣೆ ಮಾಡುತ್ತಿದ್ದೇವೆಯೇ? ಎಂದು ಚಿಂತಿಸಬೇಕಾಗಿದೆ. ಪರಿಸರವನ್ನು ರಕ್ಷಣೆ ಮಾಡಿಕೊಂಡು ಬುಡಕಟ್ಟು ಜನರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ರೂಪಿಸಲು ಚರ್ಚೆಗಳು ನಡೆಯಬೇಕಿದೆ ಎಂದರು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಎಚ್.ಎಸ್. ಗಿರಿಜಾಂಬ ಮಾತನಾಡಿ, ಬುಡಕಟ್ಟು ಸಮುದಾಯದ ಯಾವುದಾದರೊಂದು ಹಾಡಿಯನ್ನು ತೆಗೆದುಕೊಂಡು ಮಾದರಿ ಹಾಡಿಯನ್ನಾಗಿಮಾಡಬೇಕು ಅಲ್ಲಿಗೆ ಬಂದು ಜನರು ಬುಡಕಟ್ಟು ಜನರ ಆಚಾರವಿಚಾರಗಳನ್ನು ಸಂಸ್ಕೃತಿಯನ್ನು ಕಲಿತು ಬರಬೇಕು ಎನ್ನುವುದು ನಮ್ಮ ಆಲೋಚನೆಯಾಗಿದ್ದು, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನಗರದಿಂದ ಜನರನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಅವರ ಅದ್ಭುತ ಜೀವನಶೈಲಿಯನ್ನು ಅವರಿಗೆ ಧಕ್ಕೆ ಆಗದಂತೆ ಅವರನ್ನೇ ಒಳಗೊಂಡು ಅವರೇ ಇತರೆ ಜನರಿಗೆ ಅವರ ಜೀವನ ಶೈಲಿಯನ್ನು ಪರಿಚಯಿಸುವ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.ಲೆಕ್ಕಾಧಿಕಾರಿ ಬಿ.ಆರ್. ಭವ್ಯ, ಆಧೀಕ್ಷಕಿ ಎಂ.ವಿ. ನಾಗರತ್ನ, ಡಾ.ಕೆ.ವಿ. ಕೃಷ್ಣಮೂರ್ತಿ, ಡಾ. ಕಲಾವತಿ, ಡಾ.ಬಿ.ಆರ್. ಮಂಜುನಾಥ್, ಡಾ. ಮೋಹನ್ ಕುಮಾರ್, ಡಾ.ಕೆ.ಡಿ. ದಿನೇಶ್, ಡಾ. ರವಿಕುಮಾರ್, ರಮೇಶ್, ಸಿ.ಕೆ. ಗಂಗಾಧರ ಇದ್ದರು.