ಅಂಬೇಡ್ಕರ್‌ ವಿರುದ್ಧ ಹೇಳಿಕೆ: ಅಮಿತ್‌ ಶಾ ವಿರುದ್ಧ ದಸಂಸ ಪ್ರತಿಭಟನೆ

| Published : Dec 21 2024, 01:19 AM IST

ಸಾರಾಂಶ

Statement against Ambedkar: Dalith protests against Amit Shah

-ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರರಿಗೆ ಮನವಿ

----

ಕನ್ನಡಪ್ರಭ ವಾರ್ತೆ ಶಹಾಪುರ

ಅಂಬೇಡ್ಕರ್ ಕುರಿತು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಆಗ್ರಹಿಸಿ ತಹಸೀಲ್ದಾರ್‌ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಮಿತಿಯ ಮುಖಂಡರು, ದೇಶದ ಕೋಟ್ಯಂತರ ದಲಿತರು ಮತ್ತು ವಂಚಿತ ವರ್ಗಗಳಿಗೆ ಅಂಬೇಡ್ಕರ್ ದೇವರಿಗಿಂತ ಕಡಿಮೆಯಿಲ್ಲ. ಅಂಬೇಡ್ಕರ್ ಅವರಿಗೆ ಹಕ್ಕುಗಳನ್ನು ನೀಡಿದ್ದರಿಂದ ಇಂದು ಕೋಟಿಗಟ್ಟಲೆ ವಂಚಿತರು ನೆಮ್ಮದಿಯಿಂದ ಕಾನೂನು ರಕ್ಷಣೆಯಲ್ಲಿ ಬದುಕಿದ್ದಾರೆ. ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಪ್ರತಿನಿತ್ಯವು ಸ್ಮರಿಸುತ್ತದೆ. ಅವರು ನೀಡಿರುವ ಸಂವಿಧಾನವನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ, ದೇಶದ ಆಡಳಿತ ನಡೆಸುತ್ತಿರುವ ಕೋಮುವಾದಿಗಳು ಅವರನ್ನೇ ಅಪಮಾನ ಮಾಡುತ್ತಿದ್ದಾರೆ. ದೇವರ ಹೆಸರು ಹೇಳಿದರೆ ಮುಕ್ತಿ ಸಿಗುತ್ತದೆ. ಅಂಬೇಡ್ಕರ್ ಹೆಸರು ಹೇಳಿದರೆ ಮುಕ್ತಿ ಸಿಗಲ್ಲ ಎಂದರೆ, ಇದು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಸಂವಿಧಾನ ವಿರುದ್ಧವಾಗಿದೆ. ಅವರು ಆರ್.ಎಸ್.ಎಸ್. ನವರ ಇಚ್ಛೆಯಿಂತೆ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮನುಸ್ಮೃತಿ ತರುವ ತವಕದಲ್ಲಿದ್ದಾರೆ. ಅದಕ್ಕಾಗಿ ಯಾವಾಗಲೂ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಡಾ. ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಆ ಮೂಲಕ ಬಂದ ಪ್ರಜಾಪ್ರಭುತ್ವದ ಹಕ್ಕನ್ನು ಮೊದಲಿಂದಲೂ ಕಸಿಯುವ ಪ್ರಯತ್ನ ನಡೆಸುತ್ತಿರುವವರೇ ಕೋಮುವಾದಿ ಬಿಜೆಪಿಗರು ಎಂದು ಆರೋಪಿಸಿದರು.

ಭಾರತೀಯರ ಪಾಲಿಗೆ ಸಂವಿಧಾನವೇ ಸ್ವರ್ಗ. ಅಂಬೇಡ್ಕರ್ ಅವರಿಂದಲೇ ಸತತವಾಗಿ ಮೂರು ಬಾರಿ ದೇಶದ ಗೃಹ ಮಂತ್ರಿಗಳಾಗಿದ್ದೀರಿ ಎಂಬುದನ್ನು ಮರೆತಂತಿದೆ. ಕೂಡಲೇ ಪ್ರಧಾನಿಯವರು ಶಾ ರನ್ನು ಸಂಪುಟದಿಂದ ವಜಾಗೊಳಿಸಬೇಕು. ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಬಗ್ಗೆ ಮಾತಾಡಿದರೆ ಸಹಿಸಲ್ಲ. ತಕ್ಷಣ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡು ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ತಾಲೂಕು ಸಂಚಾಲಕ ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ನಾಗರಾಜ ಕೊಡಮನಳ್ಳಿ, ಶ್ರೀಮಂತ ಸಿಂಗನಹಳ್ಳಿ, ಸಂಘಟನೆ ಸಂಚಾಲಕ ಪುರಷೋತ್ತಮ ಬಬಲಾದ, ನಗರ ಸಂಚಾಲಕ ಮಲ್ಲಿಕಾರ್ಜುನ ಹುರಸಗುಂಡಗಿ, ಜಿ.ವಿ.ಒ. ಸಂಚಾಲಕ ಬಲಭೀಮ ಬೇವಿನಹಳ್ಳಿ, ವಸಂತ ಕೋಗಿಲ್‌ಕರ್, ಜಿ.ವಿ.ಒ.ಸಂಘಟನಾ ಸಂಚಾಲಕ ದೊಡ್ಡಪ್ಪ ಕಾಡಂಗೇರಾ, ಚನ್ನಬಸ್ಸು ಗುರಸಣಗಿ, ಶರಣಪ್ಪ ಮಾಳಳ್ಳಿ, ತಾಯಪ್ಪ ಭಂಡಾರಿ, ಚಂದಪ್ಪ ಮುನಮುಟಗಿ, ಕುರಕಂದಾ, ಹೊನ್ನಯ್ಯ ಕುರುಕುಂದಿ, ಶರಣಪ್ಪ ಕುರಕುಂದಾ, ಸಿದ್ದಪ್ಪ ಕೊಡಮನಳ್ಳಿ, ನಾಗು ಹಳಿಸಗರ, ಚಂದ್ರು ಬುದ್ಧನಗರ, ಸುಭಾಷ ಹುರಸಗುಂಡಗಿ, ಜೈಭೀಮ ಸಿಂಗನಹಳ್ಳಿ, ಬಸಲಿಂಗ ಹಾಲಭಾವಿ, ನಾಗರಾಜ ರಸ್ತಾಪೂರ, ದೇವಪ್ಪ ಕೊಂಬಿನ್, ಹಣಮಂತ ಹುಲುಸೂರ, ಯಲ್ಲಪ್ಪ, ರಾಮಣ್ಣ, ಮಲ್ಲಪ್ಪ, ಸಾಯಬಣ್ಣ, ಅಯ್ಯಪ್ಪ, ಯಂಕಪ್ಪ ಪರಶುರಾಮ ಅಳಿಗೇರಿ, ಸಾಬಣ್ಣ ಬಳ್ಳಕ್ಕಿ ಇದ್ದರು.

-----

ಫೋಟೊ:ಶಹಾಪುರ ನಗರದಲ್ಲಿ ಡಾ. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.

20ವೈಡಿಆರ್10 :