ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದ ಬೇಳೂರು ಹೇಳಿಕೆ

| Published : Nov 01 2023, 01:02 AM IST

ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದ ಬೇಳೂರು ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯನ್ನು ಹಾಡಿ ಹೊಗಳಿದ್ದು, ಜಿಲ್ಲೆ ರಾಜಕಾರಣಲ್ಲಿ ಹೊಸ ಸಂಚಲನ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಭಿನ್ನರಾಗ ಶುರು ಮಾಡಿದ್ದಾರೆ. ಅವರು ಬಿಜೆಪಿಯನ್ನು ಹಾಡಿ ಹೊಗಳಿದ್ದು, ಜಿಲ್ಲೆ ರಾಜಕಾರಣಲ್ಲಿ ಹೊಸ ಸಂಚಲನ ಮೂಡಿಸಿದೆ. ಎರಡು ದಿನಗಳ ಹಿಂದಷ್ಟೇ ಸ್ವಪಕ್ಷೀಯ ಸಚಿವ ಮಧು ಬಂಗಾರಪ್ಪ ವಿರುದ್ಧ ಬಹಿರಂಗವಾಗಿ ಅಸಮಾಧಾ‌ನ ಹೊರಹಾಕಿದ್ದಾರೆ. ಮಂಗಳವಾರ ಬಿಜೆಪಿಯ ಮಾಜಿ ಸಚಿವ ಆರಗ ಜ್ಞಾನೇಂದ್ರ ಹಾಗೂ ಕೇಂದ್ರ ಸರ್ಕಾರವನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಇದರಿಂದ ಬೇಳೂರು ಗೋಪಾಲಕೃಷ್ಣ ಅವರು ಯಾವ ಕಡೆ ತಮ್ಮ ಚಿತ್ತಹರಿಸಿದ್ದಾರೆ ಎಂಬುದರ ಕುರಿತು ಹೊಸ ಚರ್ಚೆ ಆರಂಭಗೊಂಡಿದೆ. ಕಾಂಗ್ರೆಸ್‌ಗೆ ಮುಜುಗರ: ಒಂದೆಡೆ ಕಾಂಗ್ರೆಸ್‌ನಲ್ಲಿ ಶಾಸಕರ ದ್ವಂದ್ವ ಹೇಳಿಕೆಗಳು ರಾಜ್ಯ ಕಾಂಗ್ರೆಸ್ ನಾಯಕರನ್ನು ಮುಜಗರಕ್ಕೀಡು ಮಾಡುತ್ತಿವೆ. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಕೈ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ನಡೆ ಈಗ ಮತ್ತೆ ಪಕ್ಷದ ನಾಯಕರನ್ನು ಮುಗುಗರಕ್ಕೀಡು ಮಾಡುವುದು ಖಚಿತವಾಗಿದೆ. ಸದಾ ರೆಬಲ್‌ ಮನಃಸ್ಥಿತಿಯ ಬೇಳೂರು ಗೋಪಾಲಕೃಷ್ಣ ಅವರು ಈ ಹಿಂದೆ ಕೂಡ ತಾವಿದ್ದ ಪಕ್ಷದಲ್ಲಿ ಸಾಕಷ್ಟು ಬಾರಿ ಭಿನ್ನಮತೀಯರಾಗಿ ಗುರುತಿಸಿಕೊಂಡವರೆ. ಬೇಳೂರಿಗೇಕೆ ಅಸಮಾಧಾನ?: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಚಿವ ಸಂಪುಟ ರಚನೆ ವೇಳೆ ತಾವು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ತರುವಾಯ ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ, ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಿತ್ತು. ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಬೇಳೂರು ಸ್ವಪಕ್ಷೀಯ ನಾಯಕರ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಯನೂರು ಮಂಜುನಾಥ್‌, ಎಂ.ಶ್ರೀಕಾಂತ್ ಮತ್ತಿತರರು ತಮ್ಮ ಮೂಲಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಇವರಿಬ್ಬರೂ ತಮ್ಮ ಬೆಂಬಲಿಗರ ಜೊತೆ ಬೆಂಗಳೂರಿನಲ್ಲಿ ಪಕ್ಷದ ವರಿಷ್ಠರ ಎದುರಿನಲ್ಲಿಯೇ ಪಕ್ಷದ ಕಚೇರಿಯಲ್ಲಿ ಸೇರ್ಪಡೆಗೊಂಡರು. ಈ ವೇಳೆಯಲ್ಲಿ ಮಧು ಬಂಗಾರಪ್ಪ ಉಸ್ಥಿತರಿದ್ದರು. ಎಂ.ಶ್ರೀಕಾಂತ್‌ ಸೇರ್ಪಡೆ ವೇಳೆ ಮಧು ಬಂಗಾರಪ್ಪ ಜೊತೆ ಗೀತಾ ಶಿವರಾಜ್‌ ಕುಮಾರ್‌ ಕೂಡ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಆದರೆ ತಾವೊಬ್ಬ ಪ್ರಮುಖ ನಾಯಕರಾಗಿದ್ದೂ, ತಮ್ಮ ಗಮನಕ್ಕೆ ಈ ವಿಷಯ ತಾರದೇ ಇರುವುದು ಗೋಪಾಲಕೃಷ್ಣ ಅವರಲ್ಲಿ ಬೇಸರ ಮೂಡಿಸಿದೆ ಎನ್ನುವುದು ಅವರ ಬೆಂಬಲಿಗರ ಮಾತು. ಜೊತೆಗೆ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸದೇ ಗೀತಾ ಶಿವರಾಜ್‌ ಕುಮಾರ್ ಅವರನ್ನು ಆಹ್ವಾನಿಸಿರುವುದು ಕೂಡ ಈ ಅಸಮಾಧಾನಕ್ಕೆ ಕಾರಣ. ಇದಲ್ಲದೇ, ಮಧು ಬಂಗಾರಪ್ಪ ಅವರು ಜಿಲ್ಲೆಗೆ ಬರುವ ವೇಳೆ ಮತ್ತು ಸಾಗರದಲ್ಲಿನ ಕಾರ್ಯಕ್ರಮದ ವೇಳೆ ಕೂಡ ಗೋಪಾಲಕೃಷ್ಣ ಅವರಿಗೆ ಯಾವುದೇ ಸೂಚನೆ ನೀಡದೇ ಇರುವುದು ತಮ್ಮನ್ನು ನಿರ್ಕ್ಷಿಸಲಾಗುತ್ತಿದೆ ಎಂಬ ಭಾವ ಬಲಿಯುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶಾಸಕ ಬೇಳೂರು ದ್ವಂದ್ವ ನಡೆ: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿರುವ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು, ಯಡಿಯೂರಪ್ಪ ಅವರ ಮಗ ರಾಘವೇಂದ್ರ ಅವರನ್ನು ಎದುರಿಸುವ ಶಕ್ತಿ ನನಗೆ ಇದೆ, ನನಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಬೇಕು, ಮಾಜಿ ಮುಖ್ಯಮಂತ್ರಿಗಳ ಮಕ್ಕಳೇ ಅಧಿಕಾರದಲ್ಲಿರಬೇಕಾ ಎಂದು ಪ್ರಶ್ನಿಸಿದ್ದಾರೆ. ಆಪರೇಷನ್ ಕಮಲ ಮಾಡುವುದು ಬಿಜೆಪಿ ಅವರ ಹುಚ್ಚುಕನಸು ಎಂದೂ ಹೇಳಿಕೆ ನೀಡುತ್ತಾರೆ. ಹೀಗೆ ಮೊನ್ನೆಯವರೆಗೂ ಬಿಜೆಪಿ ವಿರುದ್ಧವೇ ಹರಿಹಾಯುತ್ತಿದ್ದ ಬೇಳೂರು, ಈಗ ಏಕಾಏಕಿ ಬಿಜೆಪಿ ನಾಯಕರನ್ನು ಬಹಿರಂಗವಾಗಿಯೇ ಮುಕ್ತಕಂಠದಿಂದ ಹಾಡಿ ಹೊಗಳಿ ಮಾತನಾಡುತ್ತಿರುವುದು ಆಪರೇಷನ್ ಕಮಲದ ಮುನ್ಸೂಚನೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಡುತ್ತಿವೆ. ಜ್ಞಾನೇಂದ್ರರನ್ನು ಗೋವಿಗೆ ಹೋಲಿಸಿದ್ದರು: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸನಗರ ತಾಲೂಕಿನ ಮುಂಬಾರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ವೇಳೆ ಕೇಂದ್ರ ಸರ್ಕಾರ ಹಾಗೂ ಮಾಜಿ ಗೃಹ ಸಚಿವ, ಹಾಲಿ‌ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಆರಗ ಜ್ಞಾನೇಂದ್ರ ಅವರನ್ನು, ಮುಂದೆ ಬಂದರೆ ಹಾಯುವುದಿಲ್ಲ, ಹಿಂದೆ ಬಂದರೆ ಒದೆಯುವುದಿಲ್ಲ ಎನ್ನುವ ಮೂಲಕ ಗೋವಿಗೆ (ಬಸವಣ್ಣ) ಹೋಲಿಸಿದ್ದಾರೆ. ಅಷ್ಟೇ ಅಲ್ಲದೇ, ಅವರು ನನ್ನ ಮಾರ್ಗದರ್ಶಕರು ಎಂದಿರುವ ಹೇಳಿಕೆ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಬೇಳೂರು ಬಂಡಾಯ ಇದೇ ಮೊದಲಲ್ಲ: ಬೇಳೂರು ವರ್ಣರಂಜಿತ ರಾಜಕಾರಣಿ. ತಮ್ಮ ಅಸಮಾಧಾನಕ್ಕೆ ಬಂಡಾಯದ ಲೇಪನ ಕೊಡುವಲ್ಲಿ ಬೇಳೂರು ಹಿಂದೆ ಬಿದ್ದವರಲ್ಲ. ಬಿಜೆಪಿ ಶಾಸಕರಾಗಿದ್ದಾಗಲೇ ವಿಧಾನಸೌಧಕ್ಕೆ ಸಮಾಜವಾದಿ ಪಕ್ಷದ ಟೋಪಿ ಧರಿಸಿ, ಆ ಪಕ್ಷದ ಸಂಕೇತ ಸೈಕಲ್ ಏರಿ ಬಂದಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಸಿಡಿದೆದ್ದು, ಬಹಿರಂಗವಾಗಿಯೇ ಸಮರ ಸಾರಿದ್ದರು. ಈಗ ಕಾಂಗ್ರೆಸ್‌ನಲ್ಲಿ ಬಂಡಾಯ ಆರಂಭವಾದಂತಿದೆ. ಈಡಿಗ ನಾಯಕತ್ವಕ್ಕೆ ಪೈಪೋಟಿ: ಹಲವು ದಶಕಗಳ ಕಾಲ ಈಡಿಗ ಸಮುದಾಯದ ನಾಯಕತ್ವಕ್ಕಾಗಿ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ನಡುವೆ ಪೈಪೋಟಿ ನಡೆದಿತ್ತು. ಇದೀಗ ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಷ ನಡುವೆ ಶುರುವಾಗಿದೆ. ಜೊತೆಗೆ ಗೀತಾ ಶಿವರಾಜಕುಮಾರ್ ಜಿಲ್ಲಾ ರಾಜಕಾರಣದಲ್ಲಿ ಎಂಟ್ರಿ ಪಡೆದರೆ ಈಡಿಗ ಸಮಾಜದ ಮೇಲೆ ಮಧು ಸಂಪೂರ್ಣ ಹಿಡಿತ ಸಾಧಿಸಬಹುದು ಎಂಬ ದೂರಾಲೋಚನೆಯಿಂದ ಬೇಳೂರು ಸಣ್ಣದೊಂದು ಬಂಡಾಯದ ಕಿಡಿ ಹೊತ್ತಿಸಿದ್ದಾರೆ ಎನ್ನಲಾಗಿದೆ. - - - ಬಾಕ್ಸ್ ಮೂಲ-ವಲಸಿಗ ಒಳಬೇಗುದಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮೂಲ-ವಲಸಿಗ ಬಣ ತಿಕ್ಕಾಟ ಶುರುವಾಗಿದೆ. ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ವೇಳೆ ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಳಿಕ ಅವರನ್ನು ಸಮಾಧಾನಪಡಿಸುವ ಪ್ರಯತ್ನದಿಂದ ಅವರು ಒಲ್ಲದ ಮನಸ್ಸಿನಿಂದ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳಬೇಕಾಯಿತು. ಇನ್ನೊಂದೆಡೆ ಈ ಮುನ್ನ ಕಾಂಗ್ರೆಸ್ ಸೇರ್ಪಡೆ ಆಗಿದ್ದ ಆರ್.ಎಂ. ಮಂಜುನಾಥ್ ಗೌಡ ಸೇರಿದಂತೆ ಆಯನೂರು ಮಂಜುನಾಥ್, ಮೊನ್ನೆಯಷ್ಟೇ ಕಾಂಗ್ರೆಸ್ ಸೇರಿದ ಎಂ.ಶ್ರೀಕಾಂತ್ ಮೇಲೆ ಪಕ್ಷದ ವರಿಷ್ಠರು ತೋರುತ್ತಿರುವ ಒಲವು ಈಗ ಮೂಲಕಾಂಗ್ರೆಸ್ಸಿಗರಿಗೆ ಅಸಮಾಧಾನ ತಂದಿರುವುದು ಗುಟ್ಟಾಗಿ ಉಳಿದಿಲ್ಲ. ಈ ನಡುವೆಯೂ ಬೇಳೂರು ಈ ರೀತಿ ಪಕ್ಷದ ವಿರುದ್ಧವೇ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಎತ್ತಿತೋರಿಸುತ್ತಿದೆ. ಇದು ಈಗ ಪಕ್ಷದ ನಾಯಕರ ಕಣ್ಣನ್ನು ಕೆಂಪು ಮಾಡುವಂತಿದೆ. ರಾಜ್ಯ ರಾಜಕೀಯದಲ್ಲೂ ಬೇಳೂರು ಹೇಳಿಕೆಗಳು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿವೆ. - - - ಕೋಟ್ ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆಗಳನ್ನು ಕಾಂಗ್ರೆಸ್‌ ಪಕ್ಷ ಗಮನಿಸುತ್ತಿದೆ. ಮುಂದೆ ವರಿಷ್ಠರ ಗಮನಕ್ಕೆ ತರಲಾಗುವುದು - ಎಚ್.ಎಸ್. ಸುಂದರೇಶ್, ಜಿಲ್ಲಾಧ್ಯಕ್ಷ - - - -ಫೋಟೋ: ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಶಾಸಕ, ಸಾಗರ ಕ್ಷೇತ್ರ