ಕಾಂಗ್ರೆಸ್‌ನ ಐವರು ಶಾಸಕರಿಗೆ ಬಿಜೆಪಿ ಗಾಳ ಹಾಕಿರುವುದು ಸತ್ಯ. ಎಲ್ಲಾ ಸಾಕ್ಷ್ಯಗಳು ಹಾಗೂ ಆಫರ್ ನೀಡಿರುವ ಶಾಸಕರೊಟ್ಟಿಗೆ ಶೀಘ್ರವೇ ಮಾಧ್ಯಮದ ಎದುರು ಬರಲಿದ್ದೇವೆ. ಇದಲ್ಲದೆ ರಾಜ್ಯಾದ್ಯಂತ ಆಪರೇಷನ್ ಕಮಲದ ಬಲೆ ಬೀಸಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಪುನರುಚ್ಛರಿಸಿದರು.
ಮಂಡ್ಯ: ಕಾಂಗ್ರೆಸ್‌ನ ಐವರು ಶಾಸಕರಿಗೆ ಬಿಜೆಪಿ ಗಾಳ ಹಾಕಿರುವುದು ಸತ್ಯ. ಎಲ್ಲಾ ಸಾಕ್ಷ್ಯಗಳು ಹಾಗೂ ಆಫರ್ ನೀಡಿರುವ ಶಾಸಕರೊಟ್ಟಿಗೆ ಶೀಘ್ರವೇ ಮಾಧ್ಯಮದ ಎದುರು ಬರಲಿದ್ದೇವೆ. ಇದಲ್ಲದೆ ರಾಜ್ಯಾದ್ಯಂತ ಆಪರೇಷನ್ ಕಮಲದ ಬಲೆ ಬೀಸಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಪುನರುಚ್ಛರಿಸಿದರು. ಶುಕ್ರವಾರವಷ್ಟೇ ಬಿಜೆಪಿಯ ಆಪರೇಷನ್ ಕಮಲ ತಂಡ ಐವರು ಶಾಸಕರನ್ನು ಭೇಟಿ ಮಾಡಿ ಪಕ್ಷಕ್ಕೆ ಸೆಳೆಯಲು ೫೦ ಕೋಟಿ ರು. ಆಫರ್ ನೀಡಿರುವ ಬಗ್ಗೆ ಬಾಂಬ್ ಸಿಡಿಸಿದ್ದ ಶಾಸಕ ರವಿಕುಮಾರ್ ಗಣಿಗ ಶನಿವಾರ ಮತ್ತೆ ತಮ್ಮ ಮಾತನ್ನು ಸಮರ್ಥಿಸಿಕೊಂಡರು. ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಹೇಳಿದ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಐವರು ಶಾಸಕರಿಗೆ ೫೦ ಕೋಟಿ ರು. ಕೊಟ್ಟು ಮಂತ್ರಿಗಿರಿ ಕೊಡುವುದರ ಬಗ್ಗೆ ಪೂರಕವಾದ ಸಾಕ್ಷಿಗಳಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಇನ್ನೂ ದೊಡ್ಡ ನಾಯಕರ ಹೆಸರುಗಳಿವೆ ಎಂದು ಹೇಳಿದ್ದಾರೆ. ಅವರನ್ನು ಇಂದು ಭೇಟಿಯಾಗಲು ತೆರಳಿದ್ದೆ. ಆದರೆ, ಅವರು ತೆಲಂಗಾಣಕ್ಕೆ ಹೊರಟಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ನನ್ನಲ್ಲಿರುವ ಮಾಹಿತಿಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರೊಂದಿಗೆ ಹಂಚಿಕೊಂಡು ಅವರಲ್ಲಿರುವ ಮಾಹಿತಿಯನ್ನು ಸಂಗ್ರಹಿಸಿ ಮಾಧ್ಯಮಗಳ ಎದುರಿಗೆ ಬರುವುದಾಗಿ ಹೇಳಿದರು. ಯಡಿಯೂರಪ್ಪ ಮಾಜಿ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಪಕ್ಷಕ್ಕೆ ಕರೆದಿರುವುದು ಬೇರೆ ವಿಚಾರ ಎಂದಿದ್ದಾರೆ. ಹಾಗಾದರೆ ಮಾತುಕತೆ ನಡೆಸಿರುವುದು ನೀಡಿರುವುದು ಸತ್ಯ ಎಂದಾಯಿತಲ್ಲವೇ. ನಮ್ಮ ಪಕ್ಷದ ಐವರು ಶಾಸಕ ಮಿತ್ರರನ್ನು ಬಿಜೆಪಿಯವರು ಸಂಪರ್ಕಿಸಿರೋದು ಸತ್ಯ. ಎನ್.ಆರ್.ಸಂತೋಷ್ ಜೊತೆಗೆ ಬೆಳಗಾವಿ ಮಾಜಿ ಸಚಿವ ಹಾಗೂ ಹಳೇ ಮೈಸೂರು ಭಾಗದ ಒಬ್ಬ ವಿಧಾನಪರಿಷತ್ ಸದಸ್ಯ ಇದರಲ್ಲಿ ಭಾಗಿಯಾಗಿದ್ದಾರೆ. ಕಳೆದ ೧೦ ದಿನಗಳ ಹಿಂದೆ ಗೋಲ್ಡ್‌ಫಿಂಚ್‌ನಲ್ಲಿ ಒಬ್ಬ ಶಾಸಕರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಭೇಟಿ ಮಾಡುವ ಶಾಸಕರೆದುರು ಓಪನ್ ಸ್ಪೀಕರ್ ಇಟ್ಟು ಇನ್ನೊಬ್ಬರ ಜೊತೆ ಮಾತನಾಡಿಸುತ್ತಿದ್ದಾರೆ. ಆದರೆ, ಏನು ಮಾತನಾಡಿದ್ದಾರೆ ಎಂದು ಎನ್.ಆರ್.ಸಂತೋಷ್ ಅವರನ್ನೇ ಕೇಳುವಂತೆ ಹೇಳಿದ್ದೇನೆ. ಎರಡು ದಿನ ಕಾಲಾವಕಾಶ ಕೊಡಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎದುರು ಮಾತನಾಡಿ ನಂತರ ನಿಮ್ಮ ಮುಂದೆ ಬರುತ್ತೇನೆ ಎಂದು ನುಡಿದರು. ಬಿಜೆಪಿಯವರು ಕರ್ನಾಟಕದ ಎಲ್ಲೆಡೆ ಬಲೆ ಹಾಕುವುದಕ್ಕೆ ಹೊರಟಿದ್ದಾರೆ. ಸದ್ಯಕ್ಕೆ ಐದು ಜನರಿಗೆ ಆಫರ್ ಬಂದಿದೆ. ನನ್ನನ್ನು ಇದುವರೆಗೂ ಯಾರೂ ಸಂಪರ್ಕಿಸಿಲ್ಲ, ಪಕ್ಷಕ್ಕೆ ಬರುವಂತೆ ಆಫರ್ ಕೊಟ್ಟೂ ಇಲ್ಲ. ಅವರು ೫೦ ಕೋಟಿ ಹಣವಲ್ಲ, ೧೦೦ ಕೋಟಿ ಕೊಡುತ್ತೇನೆ ಎಂದರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು. ೧೩೬ ಜನ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಇದ್ದಾರೆ. ಯಾರು ಯಾವಾಗ ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ನಿರ್ಧರಿಸುವುದು ಹೈಕಮಾಂಡ್ ಎಂದಷ್ಟೇ ಹೇಳಿ ಮಾತಿಗೆ ಬ್ರೇಕ್ ಹಾಕಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.