ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಕಾರಿಂಜ ಸಮೀಪದ ಪುಳಿಮಜಲು ನಿವಾಸಿಯಾದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಜನಾಂದೋಲನಕ್ಕೆ ವಿಹಿಂಪ, ಬಜರಂಗದಳ ಯೋಜನೆ ರೂಪಿಸಿದೆ. ಮೇ ೨೦ಕ್ಕೆ ಮಂಗಳೂರಿನಲ್ಲಿ ಬೃಹತ್ ಆಂದೋಲನ ನಡೆಯಲಿದೆ ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ ನೀರಜ್ ದೋನೆರಿಯಾ ತಿಳಿಸಿದ್ದಾರೆ.ಅವರು ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಹಾಸ್ ಶೆಟ್ಟಿಯವರ ಹತ್ಯೆ ಹಿಂದುಗಳನ್ನು ಭಯದ ವಾತಾವರಣಕ್ಕೆ ತಳ್ಳುವ ಮತ್ತು ಧರ್ಮ ರಕ್ಷಣೆ ಮಾಡದಂತೆ ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಹಿಂದುಗಳನ್ನು ಗುರಿ ಮಾಡಿ ಹತ್ಯೆ ಮಾಡಿದ ರೀತಿಯಲ್ಲಿ ನಡೆಸಲಾಗಿದೆ. ಈ ಹತ್ಯೆಯ ಹಿಂದೆ ನಿಷೇಧಿತ ಸಂಘಟನೆ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿದ್ದು, ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಿಂದ ಹಣಕಾಸು ಪೂರೈಕೆಯಾಗಿದೆ. ಸ್ಲೀಪರ್ ಸೆಲ್ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಹಾಗಾಗಿ ಯಾವುದೇ ಒತ್ತಡಕ್ಕೆ ಒಳಗಾಗದೇ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು.
ಹತ್ಯೆಗೆ ರಾಜಕೀಯ ಕೈವಾಡ:ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ರಾಜಕೀಯ ಕೈವಾಡವೂ ಇದೆ. ಯಾಕೆಂದರೆ ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಅವರ ಮನೆಗೆ ಸರ್ಕಾರದಿಂದ ಜನಪ್ರತಿನಿಧಿಗಳು ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ಜೊತೆಗೆ ಯಾವುದೇ ಆರ್ಥಿಕ ನೆರವನ್ನೂ ನೀಡಿಲ್ಲ. ಆದರೆ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನುವ ಪೊಲೀಸರು ಆರೋಪಿಗಳಿಗೆ ಮುಖಗವಸು ಹಾಕಿ ಮಾಧ್ಯಮದ ಮುಂದೆ ತೋರಿಸಿದ್ದಾರೆ. ಆದರೆ ಮುಖಗವಸಿನ ಒಳಗೆ ನಿಜವಾಗಿ ಕೊಲೆ ಮಾಡಿದ ಆರೋಪಿ ಇದ್ದಾರೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ. ಹಾಗಾಗಿ ಹತ್ಯೆಗೆ ರಾಜಕೀಯ ಕೈವಾಡ ಇದೆಯೇ ಎಂಬ ಸಂಶಯ ಮೂಡಿದೆ ಎಂದು ಹೇಳಿದರು.ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಮಾತನಾಡಿ, ಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸುಹಾಸ್ ಶೆಟ್ಟಿಗೆ ಕೊಲೆ ಬೆದರಿಕೆ, ದಮ್ಕಿ ಹಾಕುವ ಪೋಸ್ಟರ್ ಹರಿದಾಡುತ್ತಿತ್ತು. ಅಷ್ಟಾದಾರೂ ಕೂಡ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಜೊತೆಗೆ ಪೊಲೀಸ್ ಸೇರಿದಂತೆ ಕೆಲವು ಜನಪ್ರತಿನಿಧಿಗಳು ಕೂಡ ಇದರಲ್ಲಿ ಶಾಮೀಲಾಗಿರುಬಹುದು ಎಂದರು.
ಕೆಲವು ದಿನಗಳ ಹಿಂದೆ ರಾಜ್ಯದ ಗೃಹಮಂತ್ರಿಗಳು ಮಾಧ್ಯಮದ ಮೂಲಕ ಆ್ಯಂಟಿ ಕಮ್ಯುನಲ್ ಪೋರ್ಸ್ ಅನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡುವ ಕುರಿತು ಹೇಳಿಕೆ ನೀಡಿದ್ದು, ಜೊತೆಗೆ ಪ್ರಚೋದನೆ ಮಾಡುವವರನ್ನು ಬಂಧಿಸುತ್ತೇನೆ ಎಂದು ತಿಳಿಸಿದ್ದಾರೆ. ಆದರೆ ಅವರ ಹೇಳಿಕೆಯನ್ನು ಸೂಕ್ಷ್ಮವವಾಗಿ ಗಮನಿಸಿದಾಗ ಹತ್ಯೆ ಮಾಡುವ ಪೋಸ್ಟರ್ ಹಾಕುವವರು ಯಾರನ್ನು ಪ್ರಚೋದನೆ ಮಾಡುತ್ತಿದ್ದಾರೆ. ಆ ಪ್ರಚೋದನೆ ಮಾಡುವವರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಹಸಂಯೋಜಕ ಗೋವರ್ಧನ್, ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ, ವಿಶ್ವ ಹಿಂದು ಪರಿಷದ್ ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಹರೀಶ್ ದೋಳ್ಪಾಡಿ ಉಪಸ್ಥಿತರಿದ್ದರು.