ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೈ ಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ಆರಂಭಿಸಲಾಗುವುದು ಎಂದು ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.ಪಟ್ಟಣದ ಸಂಘದ ಕಚೇರಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ಬಾಯಿ ತಪ್ಪಿನಿಂದ ಮತದ ಹಕ್ಕು ಕುರಿತು ಮಾತನಾಡಿದ್ದಾಗಿ ಹೇಳಿ ತಮ್ಮ ಹೇಳಿಕೆ ಕುರಿತು ವಿಷಾಧಿಸಿದ್ದು, ಸಾಂವಿಧಾನಿಕ ಹಕ್ಕುಗಳು ಎಲ್ಲಾ ಜನರಿಗೂ ದಕ್ಕುವುದು ನ್ಯಾಯಸಮ್ಮತ ಎಂದು ಪ್ರತಿಪಾದಿಸಿದ್ದಾರೆ ಎಂದರು.
ಇಂತಹ ಸ್ಪಷ್ಟಿಕರಣದ ನಂತರವೂ ಪೊಲೀಸರು ದೂರು ದಾಖಲಿಸಿಕೊಂಡು ಸ್ವಾಮೀಜಿಗಳಿಗೆ ವಿಚಾರಣಾ ನೋಟಿಸ್ ಕೊಟ್ಟಿರುವ ಕ್ರಮ ಸರಿಯಲ್ಲ. ಕೂಡಲೇ ವಿಚಾರಣಾ ನೋಟಿಸ್ ಕೊಟ್ಟಿರುವ ಕ್ರಮ ಕೈ ಬಿಟ್ಟು ಪ್ರಕರಣ ಮುಕ್ತಾಯಗೊಳಿಸಬೇಕು ಎಂದು ಒತ್ತಾಯಿಸಿದರು.ಸ್ವಾಮೀಜಿಗಳು ತಮ್ಮ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಆ ನಂತರವೂ ಸರ್ಕಾರ ಪ್ರಕರಣ ಮುಂದುವರೆಸಿದ್ದೆ ಆದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಭಕ್ತರು ಪಕ್ಷತೀತಾವಾಗಿ ರಾಜ್ಯಾದ್ಯಂತ ಹೋರಾಟ ಹಮ್ಮಿಕ್ಕೊಳ್ಳುವುದು ಅನಿವಾರ್ಯವಾಗಲಿದೆ.
ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡದೆ ಈ ಪ್ರಕರಣವನ್ನು ಸುಖಾಂತ್ಯಗೊಳಿಸಬೇಕು ಎಂದು ಒತ್ತಾಯಿಸಿದರು.ಚಂದ್ರಶೇಖರನಾಥ ಸ್ವಾಮೀಜಿ ಹಿನ್ನೆಲೆ ಅವರ ಆಧ್ಯಾತ್ಮಿಕ ಚಟುವಟಿಕೆಗಳು, ಸೇವಾಪರತೆ, ಎಲ್ಲಾ ಧರ್ಮಿಯರನ್ನು ಪ್ರೀತಿಸುತ್ತಾ ಇದಿರುವುದನ್ನು ಪರಿಗಣಿಸಿ ಜೊತೆಗೆ ಅವರ ವಯಸ್ಸಿಗೆ ಅನುಗುಣವಾಗಿ ಕಾಡುತ್ತಿಹ ಕಾಯಿಲೆ ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸ್ವಾಮೀಜಿಗಳ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಲು ಪೊಲೀಸರಿಗೆ ಸೂಕ್ತ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಟಿ.ಎಂ.ಗೊಪಾಲ್ ಹಾಗು ಮರಿಸ್ವಾಮಿ ಇತರರಿದ್ದರು.