ಪ್ರತಿಮೆ ಅನಾವರಣ: ಎಚ್.ಬಿ.ಮಂಜಪ್ಪ ಹೆಸರು ಬಿಟ್ಟಿದ್ದೇಕೆ?: ಧರ್ಮಪ್ಪ, ನೆಲಹೊನ್ನೆ ಮೋಹನ್

| Published : Jan 28 2024, 01:20 AM IST

ಪ್ರತಿಮೆ ಅನಾವರಣ: ಎಚ್.ಬಿ.ಮಂಜಪ್ಪ ಹೆಸರು ಬಿಟ್ಟಿದ್ದೇಕೆ?: ಧರ್ಮಪ್ಪ, ನೆಲಹೊನ್ನೆ ಮೋಹನ್
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿಯಲ್ಲಿ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಕುರುಬ ಸಮಾಜದ ಮತ್ತೊಂದು ಸಂಘಟನೆಯಾದ ತಾಲೂಕು ಕುರುಬ ಸಮಾಜದಿಂದ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸಿರುವುದು ಸಂತೋಷದ ವಿಷಯ. ಆದರೆ, ಈ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕುರುಬ ಸಮಾಜದ ಮುಖಂಡ ಎಚ್.ಬಿ.ಮಂಜಪ್ಪ ಹೆಸರು ಕೈಬಿಟ್ಟಿರುವುದು ಸರಿಯಲ್ಲ, ಅವರ ಹೆಸರು ಏಕೆ ಕೈ ಬಿಡಲಾಗಿದೆ ಎಂದು ಸಂಬಂಧಪಟ್ಟವರು ಉತ್ತರಿಸಬೇಕು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ದೇವನಾಯಕನ ಹಳ್ಳಿಯ ಕನಕದಾಸ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕುರುಬ ಸಮಾಜದ ಮುಖಂಡ ಎಚ್.ಬಿ.ಮಂಜಪ್ಪ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಕೈಬಿಟ್ಟಿರುವುದು ಖಂಡನೀಯ ಎಂದು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕು ಕುರುಬ ಸಂಘದ ಕಾರ್ಯಾಧ್ಯಕ್ಷ ಧರ್ಮಪ್ಪ, ಅಧ್ಯಕ್ಷ ನೆಲಹೊನ್ನೆ ಮೋಹನ್ ಆಕ್ಷೇಪಿಸಿದರು.

ಪಟ್ಟಣದಲ್ಲಿ ಕುರುಬ ಸಂಘದ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.3ರಂದು ಹೊನ್ನಾಳಿಯಲ್ಲಿ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಕುರುಬ ಸಮಾಜದ ಮತ್ತೊಂದು ಸಂಘಟನೆಯಾದ ತಾಲೂಕು ಕುರುಬ ಸಮಾಜದಿಂದ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸಿರುವುದು ಸಂತೋಷದ ವಿಷಯ. ಆದರೆ, ಈ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕುರುಬ ಸಮಾಜದ ಮುಖಂಡ ಎಚ್.ಬಿ.ಮಂಜಪ್ಪ ಹೆಸರು ಕೈಬಿಟ್ಟಿರುವುದು ಸರಿಯಲ್ಲ, ಅವರ ಹೆಸರು ಏಕೆ ಕೈ ಬಿಡಲಾಗಿದೆ ಎಂದು ಸಂಬಂಧಪಟ್ಟವರು ಉತ್ತರಿಸಬೇಕು ಎಂದರು.

ಏಳಿಗೆ ಸಹಿಸದೇ ಷಡ್ಯಂತ್ರ:

ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡವರು, ಇದೀಗ ಲೋಕಸಭೆ ಚುನಾವಣೆ ಪ್ರಬಲ ಆಕಾಂಕ್ಷಿಯಾದ ಅವರ ಏಳಿಗೆ ಸಹಿಸದೇ ರೂಪಿಸಿರುವ ಷಡ್ಯಂತ್ರ. ಕನಕದಾಸರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಕುರುಬ ಸಮಾಜದ ಮುಖಂಡರು ಸೇರಿ ಕನಕ ಯುವವೇದಿಕೆ ಪದಾಧಿಕಾರಿಗಳ ಹೆಸರುಗಳ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೇ ಕನಕದಾಸರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದರು.

ಪುರಸಭೆ ಮಾಜಿ ಸದಸ್ಯ ಎಚ್.ಬಿ.ಅಣ್ಣಪ್ಪ ಮಾತನಾಡಿ ಕನಕದಾಸ ವೃತ್ತದಲ್ಲಿ ಕನಕದಾಸರ ಕಂಚಿನ ಪ್ರತಿಮೆ ಸ್ಥಾಪಿಸುವುದು ಎಚ್.ಬಿ. ಮಂಜಪ್ಪ ಕನಸಾಗಿತ್ತು, ಈ ವೃತ್ತಕ್ಕೆ 25 ವರ್ಷಗಳ ಹಿಂದೆ ಯುವಕರ ಗುಂಪೊಂದು ಕನಕದಾಸರ ವೃತ್ತ ಎಂದು ನಾಮಕರಣ ಮಾಡಿ, ಎಚ್. ಕಡದಕಟ್ಟೆ ಗ್ರಾ.ಪಂ.ಯಿಂದ ಅನುಮತಿ ಪಡೆದು ಸಭಾ ನಡವಳಿಕೆ ಮಾಡಿದ್ದರು. ಅದರ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಈ ಎಲ್ಲಾದಕ್ಕೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರ ಸಹಾಯ, ಸಹಕಾರ ಹಾಗೂ ಶ್ರಮ ಇದೆ. ಆದರೆ ಕೇವಲ ಒಂದು ವರ್ಷದ ಅವಧಿಯಲ್ಲಿ ದಿಢೀರನೇ ಬಂದ ಈಗಿನ ಸಮಿತಿಯವರು ತರಾತುರಿಯಲ್ಲಿ ಇದೆಲ್ಲ ಮಾಡಿದ್ದಾರೆ ಎಂದು ದೂರಿದರು.

ಸಂಘದ ಗೌರವಾಧ್ಯಕ್ಷ ಆರುಂಡಿ ಪ್ರಕಾಶ್ ಮಾತನಾಡಿ, ಎಚ್.ಬಿ.ಮಂಜಪ್ಪ ಜಿಲ್ಲಾಮಟ್ಟ ಹಾಗೂ ರಾಜಕೀಯವಾಗಿ ಪಕ್ಷದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತಿದ್ದಾರೆ. ಇದನ್ನು ಸಹಿಸದ ನಮ್ಮವರೇ ಕೆಲವರು ಎಚ್.ಬಿ. ಮಂಜಪ್ಪರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆದ್ದರಿಂದ ತಕ್ಷಣವೇ ಎಚ್.ಬಿ. ಮಂಜಪ್ಪ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಬೇಕು. ಕನಕದಾಸರಂತಹ ಶ್ರೇಷ್ಠ ವ್ಯಕ್ತಿಯ ಪ್ರತಿಮೆ ಅನಾವರಣ ಕುರುಬ ಸಮಾಜ ಸೇರಿ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ಆಚರಿಸೋಣ ಇಂತಹ ಕೆಲಸಗಳಲ್ಲಿ ಭೇದಭಾವ ತೋರುವುದು ಸರಿಯಲ್ಲ ಎಂದರು.

ಸಂಘದ ಉಪಾಧ್ಯಕ್ಷ ಎಚ್. ನರಸಪ್ಪ, ಎಚ್.ಡಿ. ವಿಜೇಂದ್ರಪ್ಪ, ಬೆನಕಪ್ಪ ಹರಳಹಳ್ಳಿ, ಕುಂಬಳೂರು ವಾಗೀಶ , ಕೆ.ಪುಟ್ಟಪ್ಪ, ಖಜಾಂಚಿ ಎಚ್.ಎ.ನರಸಿಂಹಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಹೇಶ್, ಮುಕ್ತೇನಹಳ್ಳಿ ಕನಕದಾಸ ಉಪಸ್ಥಿತರಿದ್ದರು. ಸಭೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಹೆಸರು ಕೈ ಬಿಟ್ಟಿದ್ದಕ್ಕೆ ಕಾರಣ ನೀಡಿ

ಕುರುಬ ಸಮಾಜ ಒಡೆದು ಎರಡು ಬಣಗಳಾಗಿ ಮಾಡಿ ಲಾಭ ತೆಗೆದುಕೊಳ್ಳಲು ಹೊರಟಿರುವ ಕೆಲವರು ಎಚ್.ಬಿ.ಮಂಜಪ್ಪ ವಿರುದ್ಧ ಸಂಚು ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಫೆ. 2ರೊಳಗೆ ಎಚ್.ಬಿ.ಮಂಜಪ್ಪ ಹೆಸರು ಕೈ ಬಿಟ್ಟಿರುವುದಕ್ಕೆ ಸೂಕ್ತ ಕಾರಣ ನೀಡಬೇಕು. ಇಲ್ಲವಾದರೆ ಅವಳಿ ತಾಲೂಕು ಕುರುಬ ಸಂಘದ ವತಿಯಿಂದ ಕನಕದಾಸರ ಪ್ರತಿಮೆ ಫೆ 2ರಂದು ನಾವೇ ಅನಾವರಣಗೊಳಿಸಿ ಮಾಲಾರ್ಪಣೆ ಮಾಡುತ್ತೇವೆ.

ಧರ್ಮಪ್ಪ,ಕಾರ್ಯಾಧ್ಯಕ್ಷ , ನೆಲಹೊನ್ನೆ ಮೋಹನ್, ಅಧ್ಯಕ್ಷ

----------------------