ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರಾಜಕೀಯ ಕ್ಷೇತ್ರದಲ್ಲಿ ಶ್ರೇಷ್ಠ ರಾಜಕಾರಣಿಗಳನ್ನು ಗುರುತಿಸಲು ಯೋಚಿಸುವ ಸ್ಥಿತಿ ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.ಪಟ್ಟಣದ ಕಸಾಪ ಭವನದಲ್ಲಿ ಶ್ರೀ ಮರಿದೇವೇಗೌಡ ಜನಕಲ್ಯಾಣ ಪ್ರತಿಷ್ಠಾನ ಚಿಕ್ಕಾಡೆ ಇವರ ವತಿಯಿಂದ ನಡೆದ ಶ್ರೀ ಮರಿದೇವೇಗೌಡರ ಮೂರನೇ ವರ್ಷದ ಪುಣ್ಯಸ್ಮರಣೆ ಮತ್ತು ಶ್ರೀ ಮರಿದೇವೇಗೌಡ ಸ್ಮಾರಕ ಜನಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತು ಮಂದಿ ರಾಜಕಾರಣಿಗಳ ಪೈಕಿ ಒಬ್ಬ ಶ್ರೇಷ್ಠವಾದ ರಾಜಕಾರಣಿ ಯಾರೆಂದು ಗುರುತಿಸಿ ಎಂದರೆ ನಾವು ಒಬ್ಬರನ್ನು ಗುರುತಿಸಿದರೆ ಸಮಾಜ ಎಲ್ಲಿ ನಮ್ಮನ್ನು ಟೀಕಿಸುವುದೋ ಎಂಬ ಹಿಂಜರಿಕೆ ಮನೋಭಾವ ಜನರಲ್ಲಿ ಮೂಡುವ ಸನ್ನಿವೇಶ ಇವತ್ತಿನ ರಾಜಕೀಯ ಕ್ಷೇತ್ರದಲ್ಲಿ ಎದುರಾಗಿದೆ. ಒಬ್ಬ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಲು ಕ್ಲಿಷ್ಟಕರವಾದ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ವಿಷಾದಿಸಿದರು.ಮಂಡ್ಯ ಜಿಲ್ಲೆಯೂ ಹಲವಾರು ಅಪ್ರತಿಮ ರಾಜಕಾರಣಿಗಳಿಗೆ ಜನ್ಮಕೊಟ್ಟಿದೆ. ಅಂತಹ ಶ್ರೇಷ್ಠ ರಾಜಕಾರಣಿಗಳ ಪೈಕಿ ಮರಿದೇವೇಗೌಡರು ಸಹ ಒಬ್ಬರಾಗಿದ್ದಾರೆ. ಮರಿದೇವೇಗೌಡರು ಮನೆ, ಕುಟುಂಬಕ್ಕಿಂತ ಹೆಚ್ಚು ಸಮಯವನ್ನು ಸಮಾಜ, ಸಮುದಾಯಕ್ಕಾಗಿ ನೀಡಿದ್ದಾರೆ. ದೇವೇಗೌಡರ ಕನಸ್ಸು ಕುಟುಂಬದಿಂದ ಆಚೆಗೆ ಸಮಾಜ, ನೆಲ, ನಂಬಿದವರ ಕಡೆಗೆ ಶಕ್ತಿಯುತವಾಗಿ, ಮೌಲ್ಯಯುತವಾಗಿ ರಾಜಕೀಯ ಮಾಡಿದವರು. ಹಾಗಾಗಿ ಸಮಾಜದಲ್ಲಿ ಅವರ ಹೆಸರು ಚಿರಸ್ತಾಯಿಯಾಗಿ ಉಳಿಯಲು ಸಾಧ್ಯವಾಗಿದೆ ಎಂದರು.
ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ನಮ್ಮ ಮನೆ, ಕುಟುಂಬ, ಗ್ರಾಮ, ರಾಷ್ಟ್ರ ಹಾಗೂ ಜಗತ್ತಿನ ಇತಿಹಾಸವನ್ನು ಸ್ಮರಿಸುವಂತೆ ಮಾಡಬೇಕಾಗಿದೆ. ನಮ್ಮ ಹಿರಿಯನ್ನು ಸ್ಮರಿಸುವ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಮಕ್ಕಳು, ಮೊಮ್ಮಕ್ಕಳನ್ನು ತೊಡಗಿಸಿಕೊಂಡು ಮಾಡುವಂತೆ ಮಾಡಬೇಕು. ಆಗ ಮಕ್ಕಳಿಗೆ ಪೂರ್ವಿಕರು, ಕುಟುಂಬದ ಇತಿಹಾಸ ತಿಳಿಯುತ್ತದೆ ಎಂದು ತಿಳಿಸಿದರು.ಕೊಮ್ಮೇರಹಳ್ಳಿ ಶಾಖಾಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಕೋಟಿ ಜೀವರಾಶಿಗಳಲ್ಲಿ ಮನುಷ್ಯನ ಜನ್ಮ ಶ್ರೇಷ್ಠವಾಗಿದೆ. ಹಲವು ಜೀವರಾಶಿಗಳ ಪೈಕಿ ಮನುಷ್ಯನಿಗೆ ದೇವರು ಮಾತನಾಡುವ ಶಕ್ತಿ ಕೊಟ್ಟಿದ್ದಾರೆ. ಮನುಷ್ಯ ಮೋಕ್ಷ ಪಡೆದರೆ ಮಾತ್ರ ಸಾರ್ಥಕತೆ ಪಡೆದುಕೊಂಡಂತಾಗುತ್ತದೆ. ಆದರೆ, ಇಂದು ಹೆಣ್ಣು, ಹೊನ್ನು, ಮಣ್ಣು, ಅಧಿಕಾರದ ಹಿಂದೆ ಹೋಗಿ ಮೋಕ್ಷ ಪಡೆಯುತ್ತಿರುವವರೇ ಕಡಿಮೆಯಾಗಿದ್ದಾರೆ ಎಂದು ವಿಷಾದಿಸಿದರು.
ಪ್ರಶಸ್ತಿ ಸ್ವೀಕರಿಸಿ ಕ್ಯಾತನಹಳ್ಳಿ ರಾಮಣ್ಣ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಸಜ್ಜನ ರಾಜಕಾರಣಿಗಳಿಗಿಂತ ಸುಳ್ಳುಗಳನ್ನು ಸತ್ಯವೆಂದು ಹೇಳುವ ರಾಜಕಾರಣಿಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಾಹಿತಿ ಡಾ.ಬೋರೇಗೌಡಚಿಕ್ಕಮರಳಿ, ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಮಾತನಾಡಿದರು.
ಇದೇವೇಳೆ ಜಾನಪದ ವಿದ್ವಾಂಸ ಡಾ. ಕ್ಯಾತನಹಳ್ಳಿ ರಾಮಣ್ಣ, ಪತ್ನಿ ರುಕ್ಮುಣಿ ಅವರಿಗೆ ‘ಶ್ರೀಮರಿದೇವೇಗೌಡ ಸ್ಮಾರಕ ಜನಸೇವಾ’ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.ಸಮಾರಂಭದಲ್ಲಿ ಸುಶೀಲಮ್ಮ ಮರಿದೇವೇಗೌಡ, ಜಿಪಂ ಮಾಜಿ ಸದಸ್ಯ ಬಸವೇಗೌಡ, ಪಟೇಲ್ ವೆಂಕಟೇಗೌಡ, ಪ್ರೊ.ಡಿ.ಕೆ.ದೇವೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ಚಿಕ್ಕರಾಮಾಂಜೇಗೌಡ, ನಾಗರಾಜು, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಎಂ.ಶ್ರೀಕಾಂತ್, ಸಿ.ಎಂ.ಶ್ರೀನಾಥ್, ಡಾ.ಸಿ.ಎಂ.ಶ್ರೀಧರ್, ಎಸ್.ವಾಸುದೇವ್, ಸಿ.ಎಂ.ಪೂರ್ಣಿಮಾ, ಡಾ.ಎಂ.ಕೆ.ಶಿಲ್ಪಶ್ರಿ, ಸುಷ್ಮಾ, ಕೃಷ್ಣೇಗೌಡ, ಹರೀಶ್ ಇತರರಿದ್ದರು.