ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಕೌಟುಂಬಿಕ ಸಾಮಾಜಿಕ ಸ್ವಾಸ್ಥ್ಯವಿದ್ದರೆ ಮಾತ್ರ ಸಮಾಜದಲ್ಲಿ ನೆಮ್ಮದಿ ಶಾಂತಿ ಸಿಗಲು ಸಾಧ್ಯವಿದ್ದು, ಮಾದಕ ವಿಚಾರಗಳಿಂದ ದೂರವಾಗಿ ಧರ್ಮ ಸಂಸ್ಕೃತಿಯ ಪರಿಪಾಲಕರಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಸಂಚಾಲಕ ರಾಘವೇಂದ್ರ ಪಟಗಾರ ತಿಳಿಸಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತವಾಗಿ ಆಯೋಜಿಸಿದ ಸ್ವಾಸ್ಥ್ಯ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ನಾಡಿನಲ್ಲಿ ಎಲ್ಲರೂ ಪ್ರೀತಿ ಗೌರವದಿಂದ ಬದುಕಬೇಕೆಂಬ ಸಂದೇಶ ನೀಡುತ್ತಿರುವ ಡಾ. ವೀರೇಂದ್ರ ಹೆಗ್ಗಡೆ ಅವರು ಸುಖಮಯ ಜೀವನಕ್ಕೆ ಸಂಕಲ್ಪ ನಮ್ಮದಾಗಿ ಮಾದಕ ವಸ್ತು ವಿಚಾರಗಳಿಂದ ದೂರವಾಗುವುದು ಅತ್ಯಂತ ಅವಶ್ಯ ಎನ್ನುತ್ತಾರೆ. ಆ ಕಾರಣದಕ್ಕಾಗಿಯೇ ಇಡೀ ರಾಜ್ಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳು ಹಾಗೂ ಮದ್ಯವರ್ಜನ ಶಿಬಿರಗಳ ಮೂಲಕ ಮಾದಕ ಮುಕ್ತ ರಾಜ್ಯದ ಕನಸು ಕಂಡಿದ್ದಾರೆ. ಈಗಾಗಲೇ ಇಡೀ ರಾಜ್ಯದಲ್ಲಿ 1.5 ಲಕ್ಷ ಮಾದಕ ವ್ಯಸನಿಗಳು ಮಾದಕ ಮುಕ್ತ ಜೀವನ ನಡೆಸುತ್ತಿದ್ದಾರೆ. ಇಂದು ಮಾದಕ ಮಾಫಿಯಾಗಳು ದೇಶದ ಮೇಲೆ ಆಕ್ರಮಣ ಮಾಡುತ್ತಿದ್ದು ಎಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಯುವ ಜನಾಂಗಕ್ಕೆ ಸತ್ಸಂಕಲ್ಪಕ್ಕೆ ಪ್ರೇರಣೆ ನೀಡಬೇಕಾಗಿದ್ದು ಇಂದು ತೀರ ಅವಶ್ಯವಾಗಿದೆ. ಮೊಬೈಲ್ ಈಗ ಅತಿ ದೊಡ್ಡ ಮಾದಕ ವಸ್ತುವಾಗಿ ಕಾಡುತ್ತಿದೆ. ಮಕ್ಕಳು ಮಾದಕಗಳಿಗೆ ಬಲಿಯಾಗುತ್ತಿದ್ದಾರೆ. ಕೇವಲ ಘೋಷಣೆಗಳಿಂದ ಸಮಾಜದ ಸುಧಾರಣೆ ಸಾಧ್ಯವಿಲ್ಲ. ಒಳ್ಳೆಯ ಸಂಗತಿಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಸಮಾಜ ಹಾಗೂ ಸರಕಾರದಿಂದ ನಡೆಯಬೇಕಾಗಿದೆ. ಮುಷ್ಟಿಯಲ್ಲಿ ವಿಶ್ವವನ್ನೇ ನೋಡುವ ಕಾಲದಲ್ಲಿದ್ದೇವೆ. ಆದರೆ ಒಳಿತು ಕೆಡುಕಿನ ಬಗೆಗೆ ಎಚ್ಚರಿಕೆ ಅತ್ಯವಶ್ಯ ಎಂದರು.ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಅತಿಥಿಯಾಗಿ ಮಾತನಾಡಿ, ಮೋಸದ ಮಾದಕ ಜಾಲಕ್ಕೆ ಶಾಲಾ-ಕಾಲೇಜುಗಳು ಗುರಿಯಾಗುತ್ತಿವೆ. ಪಾಲಕರು ಮಕ್ಕಳನ್ನು ನಿಯಂತ್ರಿಸಲಾಗದ ಸ್ಥಿತಿಗೆ ಮುಟ್ಟುತ್ತಿದೆ. ಇದಕ್ಕೆಲ್ಲ ಯಾರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ನಾವೇ ಅರಿತು ನಡೆದರೆ ಮಾತ್ರ ಒಳ್ಳೆಯವರಾಗಿರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಪಿ. ವಿಜಯಕುಮಾರ, ಉಪನ್ಯಾಸಕಿ ಮಂಜುಳಾ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ವಾಸಣ್ಣ ಮೂಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕಿ ಯಶೋದಾ ಮುನವಳ್ಳಿ, ಪ್ರತಿನಿಧಿ ಮನಿಷಾ ಸೇರಿದಂತೆ ಅನೇಕರಿದ್ದರು.