ಮಾದಕ ವಸ್ತುಗಳಿಂದ ದೂರವಿರಿ: ಸಿದ್ದೇಶ್‌

| Published : Jun 30 2025, 12:34 AM IST

ಸಾರಾಂಶ

ಸಿರಿಗೆರೆಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಪೊಲೀಸ್‌ ಇಲಾಖೆಯ ಸಿದ್ದೇಶ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಹಲವು ಬಗೆಯ ಮಾದಕ ವಸ್ತುಗಳಿಗೆ ಯುವ ಸಮುದಾಯ ಆಕರ್ಷಕವಾಗಿರುವ ಕಾರಣ ಅವರ ಬದುಕಿನಲ್ಲಿ ಏರುಪೇರುಗಳು ಉಂಟಾಗುತ್ತಿವೆ. ನೈಜ ಬದುಕು ಸಾಗಿಸಲು ಮಾದಕ ದ್ರವ್ಯಗಳು ಅಡ್ಡಿಯಾಗಿವೆ. ಅವುಗಳಿಂದ ಯುವ ಸಮುದಾಯ ದೂರ ಇರಬೇಕು ಎಂದು ಭರಮಸಾಗರ ಪೊಲೀಸ್‌ ಠಾಣೆಯ ಸಿದ್ಧೇಶ್‌ ಯುವಕರಿಗೆ ಕಿವಿ ಮಾತು ಹೇಳಿದರು.

ಸಿರಿಗೆರೆಯಲ್ಲಿ ಬಿಎಲ್‌ಆರ್‌ ಮತ್ತು ಎಂಬಿಆರ್‌ ಕಾಲೇಜಿನ ಎನ್‌ಸಿಸಿ ಘಟಕ ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗಗಳು ಹಾಗೂ ಭರಮಸಾಗರ ಪೊಲೀಸ್‌ ಠಾಣೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

ಮಾದಕ ದ್ರವ್ಯಗಳ ಸೇವನೆ, ಸಾಗಣೆಯ ವಿಚಾರವಾಗಿ ಪೊಲೀಸ್‌ ಇಲಾಖೆ ಸರ್ವಶಕ್ತವಾಗಿ ಹೋರಾಟ ನಡೆಸುತ್ತಿದೆ. ಇವುಗಳನ್ನು ಹೊಂದುವುದು, ಬಳಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ನಮ್ಮ ಯುವಕರು ಇದರಿಂದ ದೂರ ಇರುವ ಜೊತೆಗೆ ತಮ್ಮ ಹತ್ತಿರದವರಿಗೆ ಇದರ ಅಪಾಯಗಳ ಕುರಿತು ಮಾಹಿತಿ ನೀಡಬೇಕು ಎಂದರು.

ಮತ್ತೋರ್ವ ಅತಿಥಿಯಾಗಿದ್ದ ಠಾಣೆಯ ಎಂ.ಬಿ.ಜ್ಯೋತಿ ಮಾತನಾಡಿ, ಮಾದಕ ದ್ಯವ್ಯ ಸೇವನೆಯ ಅಪಾಯದಿಂದ ಯುವಕರನ್ನು ಅದರಲ್ಲೂ ಮುಖ್ಯವಾಗಿ ಕಾಲೇಜು ಮೆಟ್ಟಿಲು ತುಳಿದಿರುವ ವಿದ್ಯಾರ್ಥಿಗಳನ್ನು ಹಿಂದೆ ಸರಿಸಲು ಶಿಕ್ಷಕರು ಮತ್ತು ಪೋಷಕರ ಪಾತ್ರ ದೊಡ್ಡದಿದೆ. ಪರಿಣಾಮಕಾರಿ ಈ ಕೆಲಸವನ್ನು ಎಲ್ಲರೂ ಸಾಮೂಹಿಕವಾಗಿ ನಿರ್ವಹಿಸಿದರೆ ಈ ಅಂಟುಜಾಡ್ಯದಿಂದ ಯುವಕರು ಹೊರಗೆ ಬರಬಹುದು ಎಂದರು.

ಪೊಲೀಸ್‌ ಸಬ್‌ ಇನ್ಸ್‌ಫೆಕ್ಟರ್‌ ಶಿವಮೂರ್ತಿ ಮಾದಕವಸ್ತುಗಳ ಕುರಿತು ವಿದ್ಯಾರ್ಥಿಗಳಿವೆ ವಿವರಣೆ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಮೇಜರ್ ರಾಜಶೇಖರ್ ಮಾದಕ ವಸ್ತುಗಳ ಸೇವನೆ ಕುಟುಂಬ ಹಾಗೂ ಸಮಾಜದ ಮೇಲೆ ಬೀಳುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ದುಷ್ಪರಿಣಾಮಗಳು ಅಗಾಧವಾಗಿವೆ ಎಂದು ಹೇಳಿದರು.

ಪ್ರಾಚಾರ್ಯ ಶಿವನಗೌಡ ಸುರಕೋಡ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಎನ್‌ಸಿಸಿ ಅಧಿಕಾರಿ ನವೀನ್‌ ಕುಮಾರ್‌, ಭರಮಸಾಗರ ಠಾಣೆಯ ಪೊಲೀಸ್ ಸಿಬ್ಬಂದಿ ಸಿರಿಗೆರೆಯ ಪೊಲೀಸ್ ಠಾಣೆಯ ಮುಖ್ಯ ಪೇದೆ ಯತೀಶ್ ಉಪಸ್ಥಿತರಿದ್ದರು.