ಇಂಗ್ಲಿಷ್ ವ್ಯಾಮೋಹದಿಂದ ದೂರ ಉಳಿದು ಕನ್ನಡಪ್ರೇಮ ಬೆಳೆಸಿಕೊಳ್ಳಿ: ಲೋಕೇಶ್ ಬೆಕ್ಕಳಲೆ

| Published : Nov 02 2024, 01:36 AM IST / Updated: Nov 02 2024, 01:37 AM IST

ಇಂಗ್ಲಿಷ್ ವ್ಯಾಮೋಹದಿಂದ ದೂರ ಉಳಿದು ಕನ್ನಡಪ್ರೇಮ ಬೆಳೆಸಿಕೊಳ್ಳಿ: ಲೋಕೇಶ್ ಬೆಕ್ಕಳಲೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಗ್ಲಿಷ್ ವ್ಯಾಮೋಹದಿಂದ ದೂರ ಉಳಿದು ಕನಿಷ್ಠ ಸಹಿಯನ್ನಾದರೂ ಕನ್ನಡದಲ್ಲಿ ಬರೆಯುವ ಮೂಲಕ ಕನ್ನಡ ಪ್ರೇಮ ಬೆಳಸಿಕೊಳ್ಳಬೇಕು. ಮಹಾನ್ ಕವಿಗಳು ಕನ್ನಡ ತನವನ್ನು ವರ್ಣನೆ ಮಾಡಿ ಎತ್ತಿ ಹಿಡಿದಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳನ್ನು ನಾವು ನಿತ್ಯ ಸ್ಮರಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಇಂಗ್ಲಿಷ್ ವ್ಯಾಮೋಹದಿಂದ ದೂರ ಉಳಿದು ಕನಿಷ್ಠ ಸಹಿಯನ್ನಾದರೂ ಕನ್ನಡದಲ್ಲಿ ಬರೆಯುವ ಮೂಲಕ ಕನ್ನಡ ಪ್ರೇಮ ಬೆಳಸಿಕೊಳ್ಳಬೇಕು ಎಂದು ಮಂಡ್ಯ ತಾಲೂಕು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಲೋಕೇಶ್ ಬೆಕ್ಕಳಲೆ ಹೇಳಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಉಪನ್ಯಾಸ ನೀಡಿ, ಮಹಾನ್ ಕವಿಗಳು ಕನ್ನಡ ತನವನ್ನು ವರ್ಣನೆ ಮಾಡಿ ಎತ್ತಿ ಹಿಡಿದಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳನ್ನು ನಾವು ನಿತ್ಯ ಸ್ಮರಿಸಬೇಕು ಎಂದರು.

ಕನ್ನಡ ತನವನ್ನು ಉಳಿಸಲು ನಮ್ಮ ನಿತ್ಯದ ಯಾವುದೇ ಕೆಲಸ ಕಾರ್ಯಗಳಲ್ಲಿ ಹೆಚ್ಚು ಕನ್ನಡ ಬಳಸುವ ಕೆಲಸವಾಗಬೇಕು. ಕನ್ನಡಕ್ಕೆ ಹೆಚ್ಚು ಮಾನ್ಯತೆ ನೀಡಿರುವ ಕವಿಗಳನ್ನು ಇಂದು ನಾವು ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಅನ್ಯ ಭಾಷೆಗಳನ್ನು ತಿರಸ್ಕರಿಸಿ ಹೆಚ್ಚು ಕನ್ನಡ ಭಾಷೆಯನ್ನು ಬಳಸಲು ಹೆಚ್ಚು ಒತ್ತು ನೀಡಬೇಕು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ವಿವಿಧ ಶಾಲಾ ಮಕ್ಕಳಿಂದ ಕನ್ನಡ ಭಾಷೆ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇದಕ್ಕೂ ಮುನ್ನ ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಧ್ವಜಾಹರೋಣ ನೆರವೇರಿಸಿದರು. ಬಣ್ಣ ಬಣ್ಣದ ಹೂಗಳಿಂದ ಅಲಂಕೃತಗೊಂಡ ತಾಯಿ ಕನ್ನಡಾಂಬೆ ಹೊತ್ತ ತೇರನ್ನು ಪಟ್ಟಣದ ಮುಖ್ಯ ಬೀದಿಗಳ ಮೂಲಕ ಶ್ರೀ ರಂಗನಾಥಸ್ವಾಮಿ ದೇವಾಲಯದ ಆರಣದವರೆಗೆ ಮಂಗಳ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.

ಮೈದಾನದಲ್ಲಿ ರಾಷ್ಟ್ರ ಧ್ವಜವನ್ನು ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ದ್ವಜಾರೋಣ ಕಾರ್ಯ ನಡೆಸಿದರು. ನಂತರ ಶಾಸಕ ರಮೇಶ ಬಂಡಿಸಿದ್ದೆಗೌಡ ಕನ್ನಡ ಧ್ವಜಾರೋಣ ಕಾರ್ಯ ನೆರವೇರಿಸಿದರು. ಈ ವೇಳೆ ತಾಪಂ ಇಒ ವೇಣಿ, ಮುಖ್ಯಾಧಿಕಾರಿ ರಾಜಣ್ಣ, ಬಿಇಒ ಆರ್.ಪಿ. ಮಹೇಶ್, ಕಸಾಪ ಅಧ್ಯಕ್ಷ ಸಿದ್ದಲಿಂಗು, ಪುರಸಭೆ ಸದಸ್ಯರು, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.