ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಜೂಜಾಟಗಳಿಂದ ದೂರವಿದ್ದು, ಹಬ್ಬ- ಹರಿದಿನಗಳನ್ನು ಸಂಭ್ರಮದಿಂದ ಆಚರಿಸುವಂತೆ ಶಾಸಕ ಎಚ್.ಟಿ. ಮಂಜು ತಿಳಿಸಿದರು.ಮಾದಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ನಾಟಕ ಸಮಾರಂಭದಲ್ಲಿ ಮಾತನಾಡಿ, ಜೂಜಾಟ ಆರಂಭದಲ್ಲಿ ರಂಜನೆ, ಖುಷಿ ನೀಡಲಿದೆ. ನಂತರ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಆಟದಿಂದ ದೂರವಿದ್ದು ದೇಶೀ ಆಟಗಳನ್ನು ಹಬ್ಬ ಹರಿದಿನಗಳಲ್ಲಿ ಆಡಿ ಸಂಭ್ರಮಿಸಿ ಎಂದರು.
ನಾಟಕ ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಕಲೆ. ಈ ಕಲೆ ಉಳಿಸಿ ಬೆಳೆಸಲು ಯುವಕರಲ್ಲಿ ನಾಟಕದ ಅಭಿರುಚಿ ಮೂಡಿಸಬೇಕು. ಯುವಕರಿಗಾಗಿ ಹೆಚ್ಚು ನಾಟಕಗಳನ್ನು ಆಯೋಜಿಸಬೇಕು. ನಮ್ಮ ಸಂಸ್ಕೃತಿಯ ತಾಯಿ ಬೇರನ್ನು ಸುಭದ್ರಗೊಳಿಸಬೇಕು. ಮಕ್ಕಳ ಒಳಮನಸ್ಸಿನ ನಾಟಕ ಕಲೆಗೆ ಉತ್ತೇಜಿಸಿ ಎಂದು ನುಡಿದರು.ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಸುಗ್ಗಿ ಸಂಭ್ರಮದ ಯುಗಾದಿ ಚೈತ್ರ ಸಂಭ್ರಮ. ಗಿಡಮರಗಳು ಹೊಸ ಚಿಗುರಿನಿಂದ ನಳನಳಿಸುತ್ತವೆ. ಕೋಗಿಲೆಯ ಇಂಪಾದ ನಾದ ಕೇಳುವಂತೆ ಸುಂದರ ಬದುಕು ಕಟ್ಟಿಕೊಳ್ಳುವ ವಸಂತ ಪರ್ವ ಇದಾಗಿದೆ ಎಂದರು.
ಬದುಕಿನಲ್ಲಿ ಬೇವು ಬೆಲ್ಲದ ಸವಿ ಸಮರಸ ಜೀವನವಾಗಲಿ. ಮಾನವ ಶಾಂತಿ, ಸಹನೆ, ಪ್ರೀತಿ, ಸೋದರತ್ವ, ಶೌರ್ಯ ಎಲ್ಲವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಬದುಕು ಎನ್ನುವುದು ಸಾರ್ಥಕತೆ ಕಾಣುತ್ತದೆ ಎಂದು ಹೇಳಿದರು.ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿರ್ದೇಶಕ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ, ಆನೆಗೊಳ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ಕಿರಣ್, ಮಾದಾಪುರ ಗ್ರಾಪಂ ಅಧ್ಯಕ್ಷ ಜಿ.ಕೆ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಕೋಕಿಲ ಧನಂಜಯ್, ಸದಸ್ಯ ಚಿಕಣ್ಣಶೆಟ್ಟಿ, ಅರುಣ್, ಮುಖಂಡರಾದ ರಾಮಕೃಷ್ಣೇಗೌಡ, ಐಕನಹಳ್ಳಿ ಕೃಷ್ಣೇಗೌಡ, ಮೊಗಣ್ಣಗೌಡ, ಬಾಬು, ಎಂ.ಡಿ ವೇದಮೂರ್ತಿ, ಶಂಕರೇಗೌಡ, ಕನ್ಯಾಕುಮಾರಿ ಲೋಕೇಶ್ ಮತ್ತಿತರರಿದ್ದರು.