ಸಾರಾಂಶ
ಯಲ್ಲಾಪುರ: ಮದ್ಯಪಾನ, ಸಿಗರೇಟು, ಗಾಂಜಾ, ಚರಸ್, ಅಫೀಮುಗಳಂತಹ ಎಲ್ಲ ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ತೀವ್ರ ಹಾನಿಕರ. ಆದ್ದರಿಂದಲೇ ಇವುಗಳ ಮಾರಾಟ, ಉತ್ಪಾದನೆ ಮತ್ತು ಸೇವನೆಗಳನ್ನು ಸರ್ಕಾರ ನಿಷೇಧಿಸಿದ್ದು ಎನ್‌ಡಿಪಿಎಸ್ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದು ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ತಿಳಿಸಿದರು.
ಅ. ೨೪ರಂದು ಪಟ್ಟಣದ ಸಪ್ರದ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಶಿರಸಿಯ ಗ್ರೀನ್ ಕೇರ್ ಸಂಸ್ಥೆ ಮತ್ತು ಸಂಕಲ್ಪ ಟ್ರಸ್ಟ್‌ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಮ, ಸೈಬರ್ ಕ್ರೈಮ್, ರಸ್ತೆ ಸುರಕ್ಷತಾ ಕ್ರಮ ಹಾಗೂ ರಕ್ತದಾನದ ಮಹತ್ವ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಪಾರ ಜೀವಹಾನಿಗೆ ಕಾರಣವಾಗಿರುವ ಮಾದಕ ವಸ್ತು ಸೇವಿಸುವ ಆರೋಪಿಗಳಿಗೆ ಪ್ರಕರಣ ದೃಢಪಟ್ಟರೆ ಕಾರಾಗೃಹ ವಾಸ ಮತ್ತು ದಂಡ ವಿಧಿಸಲಾಗುತ್ತದೆಯಲ್ಲದೇ ಇಂತಹ ಪ್ರಕರಣ ಯಾವುದೇ ವ್ಯಕ್ತಿಗೆ ಒಮ್ಮೆ ದೃಢಪಟ್ಟರೆ ಈ ಆರೋಪದಿಂದ ಬಿಡುಗಡೆ ಅಸಾಧ್ಯ. ಅಲ್ಲದೇ ಇದು ನೌಕರಿಗೂ ಸಂಚಕಾರ ತರುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಮಿತಿ ಮೀರುತ್ತಿದ್ದು, ಇತ್ತೀಚೆಗೆ ಸೈಬರ್ ಕ್ರೈಮ್ ಕೂಡಾ ಹೆಚ್ಚುತ್ತಿದೆ. ಇಂತಹ ಸಂಗತಿಗಳಿಗೆ ನಾವೇ ಕಾರಣರಾಗಿದ್ದು, ಜಾಗೃತಿ ಮಾತ್ರ ಇವುಗಳಿಗೆ ಪರಿಹಾರ ನೀಡುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಪ್ರದ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ ಮಾತನಾಡಿ, ವಿದ್ಯಾರ್ಥಿಗಳು ವ್ಯಸನಗಳಿಗೆ ದಾಸರಾಗದೇ ಸುಂದರ ಬದುಕು ರೂಪಿಸಿಕೊಳ್ಳಬೇಕು. ಪ್ರಸ್ತುತ ೨೧ನೇ ಶತಮಾನದಲ್ಲಿ ಬದುಕಿನ ಕುರಿತಾದ ವ್ಯಾಖ್ಯಾನಗಳೇ ಬದಲಾಗಿದ್ದು, ಅವು ಸಕಾರಾತ್ಮಕವಾಗಿಲ್ಲ. ಸ್ವರ್ಗದ ಮುಖವಾಡ ಧರಿಸಿ ನಮ್ಮನ್ನು ಡ್ರಗ್ಸ್ ಸೇವನೆ ನರಕಕ್ಕೆ ಸೇರಿಸುತ್ತದೆ ಎಂದರು.
ತಾಲೂಕು ಆಸ್ಪತ್ರೆಯ ತಜ್ಞ ವೈದ್ಯೆ ಡಾ. ಸೌಮ್ಯಾ ಕೆ.ವಿ. ಮಾತನಾಡಿ, ಅತಿಯಾದ ಗುಟ್ಕಾ ಸೇವನೆ ಕಣ್ಣಿನ ಆರೋಗ್ಯಕ್ಕೆ ಮಾರಕ. ಯಾವುದೇ ಮಾದಕ ವಸ್ತು ಸೇವನೆ ಆರಂಭದಲ್ಲಿ ಸುಖ ನೀಡಿದರೂ ನಂತರ ಜೀವಕ್ಕೆ ಮಾರಕವೆನಿಸುತ್ತದೆ ಎಂದರು.ಬದುಕಿನ ಕೊನೆ ಕ್ಷಣದವರೆಗೂ ಯಾರೂ ಭರವಸೆ ಕಳೆದುಕೊಳ್ಳಬಾರದು. ಶ್ರೇಷ್ಠವಾದ ರಕ್ತದಾನ ಮಾಡಿ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿ ಎಂದರು.
ಯಲ್ಲಾಪುರದ ಕ್ರಿಯೆಟಿವ್ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸ ಮುರ್ಡೆಶ್ವರ್, ಶಿರಸಿಯ ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಆರ್. ಎಂ. ಮಾತನಾಡಿದರು.ಶಿರಸಿಯ ಸಂಕಲ್ಪ ಟ್ರಸ್ಟ್ ಅಧ್ಯಕ್ಷ ಕುಮಾರ ಪಟಗಾರ, ಗ್ರೀನ್ ಕೇರ್ ನಿರ್ದೇಶಕಿ ಆಶಾ ಡಿಸೋಜಾ ಮತ್ತಿತರರು ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ದೀಕ್ಷಾ ಹೆಗಡೆ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಚಾಲಕ ಶರತ್‌ಕುಮಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಕಾವ್ಯಶ್ರೀ ಮರಾಠಿ ನಿರ್ವಹಿಸಿದರು. ಗೀತಾ ಸಿದ್ದಿ ವಂದಿಸಿದರು.