ಔಷಧ, ಅಹಾರ ಇವರೆಡಕ್ಕೂ ನೇರವಾದ ಸಂಬಂಧವಿದೆ. ಕಲಬೆರಕ ರಹಿತ, ರುಚಿಯ ಜೊತೆಗೆ ಶುಚಿಯಿಂದ ಕೂಡಿದ ಆಹಾರ ಸೇವೆಯಿಂದ ಮನುಷ್ಯ ಔಷಧಗಳಿಂದ ದೂರವಿರಲು ಸಾಧ್ಯ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಔಷಧ, ಅಹಾರ ಇವರೆಡಕ್ಕೂ ನೇರವಾದ ಸಂಬಂಧವಿದೆ. ಕಲಬೆರಕ ರಹಿತ, ರುಚಿಯ ಜೊತೆಗೆ ಶುಚಿಯಿಂದ ಕೂಡಿದ ಆಹಾರ ಸೇವೆಯಿಂದ ಮನುಷ್ಯ ಔಷಧಗಳಿಂದ ದೂರವಿರಲು ಸಾಧ್ಯ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.ಹಾಲಪ್ಪ ಪ್ರತಿಷ್ಠಾನ ತುಮಕೂರು, ಐಎಂಎ, ಬೀದಿ ಬದಿ ವ್ಯಾಪಾರಿಗಳ ಸಂಘ, ಔಷಧ ವ್ಯಾಪಾರಿಗಳ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಕಲಿ, ಕಲಬೆರಕೆ ಆಹಾರ, ಔಷಧಗಳ ಬಗ್ಗೆ ಜನ ಜಾಗೃತಿ ಅಭಿಯಾನದಲ್ಲಿ ಜಾ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ಒಂದು ವೇಳೆ ಕಲಬೆರಕೆ, ಅಶುಚಿತ್ವ ಆಹಾರದಿಂದ ತೊಂದರೆಯಾಗಿ ಆಸ್ಪತ್ರೆಗೆ ಸೇರಿದಂತಹ ಸಂದರ್ಭದಲ್ಲಿ ಅಲ್ಲಿಯೂ ನಕಲಿ ಇಲ್ಲವೇ ಕಲಬೆರಕ ಔಷಧಗಳನ್ನು ಕೊಟ್ಟು ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ಔಷಧ ನಿಯಂತ್ರಣ, ಆಹಾರ ಸುರಕ್ಷತೆ ಅಧಿಕಾರಿಗಳ ಜೊತೆಗೆ, ಬಿಸಿಯೂಟ (ಅಕ್ಷರದಾಸೋಹ) ಅಧಿಕಾರಿಗಳ ಸಹ ನಮ್ಮೊಂದಿಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ತಾಲೂಕು, ಹೋಬಳಿ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಗುರಿಯಿದೆ. ಜನರಿಗೆ ಶುಚಿಯಿಂದ ಗುಣಮಟ್ಟದ, ಕಲಬೆರಕೆ ರಹಿತ ಪೌಷ್ಟಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧಗಳು ದೊರೆಯುಬೇಕೆಂಬುದು ನಮ್ಮ ಗುರಿಯಾಗಿದೆ. ಇದು ಯಾರ ವಿರುದ್ದವೂ ನಡೆಸುತ್ತಿರುವ ಹೋರಾಟವಲ್ಲ. ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವಾಗಿದೆ ಎಂದು ತಿಳಿಸಿದರು.

ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುಧಾಕರ್ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 10 ರಿಂದ 1500 ಮಕ್ಕಳು ಇರುವ ಶಾಲೆಗಳಲ್ಲಿ ಬೆಳಗಿನ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ ಹಾಗೂ ಸಂಜೆ ಗಣಿಭಾದಿತ ಪ್ರದೇಶಗಳಲ್ಲಿ ದ್ವಿದಳ ಧಾನ್ಯಗಳ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಅತ್ಯಂತ ಸುರಕ್ಷಿತವಾಗಿ ಬಿಸಿಯೂಟ ವಿತರಣೆ ನಡೆಯುತ್ತಿದೆ. ನಮ್ಮಲ್ಲಿರುವ ಬಿಸಿಯೂಟ ತಯಾರಕರಲ್ಲಿ ಶೇ.70ರಷ್ಟು ಸಿಬ್ಬಂದಿ ವಿದ್ಯಾವಂತರಿದ್ದರೆ, ಶೇ. 39 ರಷ್ಟು ಸಿಬ್ಬಂದಿ ಅವಿದ್ಯಾವಂತರು. ಆದರೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಿ, ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಚಂದ್ರಕಲಾ ಶಿಲ್ಪ ಮಾತನಾಡಿ, ಔಷಧಗಳ ಕಲಬೆರಕೆ ಮತ್ತು ಕಡಿಮೆ ಗುಣಮಟ್ಟದಿಂದ ಮನುಷ್ಯನ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗುತ್ತವೆ. ಕಡಿಮೆ ಗುಣಮಟ್ಟದಿಂದ ಕಾಯಿಲೆ ವಾಸಿಯಾಗುವುದು ತಡವಾದರೆ, ಕಲಬೆರಕೆಯಿಂದ ಅಡ್ಡಪರಿಣಾಮಕ್ಕೆ ತುತ್ತಾಗಬೇಕಾಗುತ್ತೆದೆ. ಹಾಗಾಗಿ ಜನರು ಜಾಗೃತರಾಗಬೇಕು. ಅಧಿಕೃತ ಎಜೆನ್ಸಿಗಳಿಂದ ಸರಬರಾಜರಾಗಿರುವ ಔಷಧಗಳನ್ನು ಅಂಗಡಿಗಳಲ್ಲಿ ವೈದ್ಯರ ಸಲಹೆಯಂತೆ ಖರೀದಿಸಿ ಬಳಸಬೇಕು. ಡಿಸ್ಕೌಂಟ್‌ಗೆ ಮಾರು ಹೋಗಬೇಡಿ, ಸಾಧ್ಯವಾದಷ್ಟು ಅನ್‌ಲೈನ್‌ನಲ್ಲಿ ಔಷಧಿ ಖರೀದಿಯನ್ನು ನಿಲ್ಲಿಸಿ ಎಂದು ಸಲಹೆ ನೀಡಿದರು.ಆಹಾರ ಸುರಕ್ಷತಾ ಅಧಿಕಾರಿ ಹರೀಶ್, ಔಷಧ ವ್ಯಾಪಾರಿಗಳ ಪರವಾಗಿ ಪಂಡಿತ ಜವಹರ್, ಐಎಂಎ ಅಧ್ಯಕ್ಷ ಡಾ. ಲೋಕೇಶ್ ಬಾಬು, ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ವೇದಮೂರ್ತಿ ಮಾತನಾಡಿದರು

ಕಾರ‍್ಯಕ್ರಮದಲ್ಲಿ ಚಿ.ನಾ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಸೇವಾದಳದ ಕೃಷ್ಣೇಗೌಡ, ಗೋವಿಂದರಾಜು, ತುರುವೇಕೆರೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಸಮಾಜಸೇವಕ ನಟರಾಜು ಶೆಟ್ಟಿ, ಕೊಂಡಜ್ಜಿ ಕುಮಾರ್, ಹೊಟೇಲ್ ಅಸೋಸಿಯೇಷನ್, ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.