ತಂಬಾಕಿನಿಂದ ದೂರವಿರಿ: ರಾಮನಗೌಡ

| Published : Feb 08 2024, 01:30 AM IST

ಸಾರಾಂಶ

ಪ್ರತಿ ಶೆಡ್‌, ಗೂಡಂಗಡಿಗಳಿಗೆ ತೆರಳಿದ ಜಾಥಾದ ಸದಸ್ಯರು ಗುಲಾಬಿ ಹೂವನ್ನು ನೀಡಿ ತಂಬಾಕು ಆರೋಗ್ಯಕ್ಕೆ ಹಾನಿಕರ ಎಂದು ಎಚ್ಚರಿಸಿದರು.

ಹರಪನಹಳ್ಳಿ: ತಂಬಾಕು ಪದಾರ್ಥಗಳಿಂದ ದೂರವಿರಿ, ಹಣ ಕೊಟ್ಟು ಅನಾರೋಗ್ಯ ತಂದುಕೊಳ್ಳುವ ಮುನ್ನ ಎಚ್ಚರಿಕೆವಹಿಸಿ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಹೇಳಿದರು.

ಪಟ್ಟಣದ ಪ್ರವಾಸಿಮಂದಿರ ವೃತ್ತದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಗುಲಾಬಿ ಆಂದೋಲನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ತಂಬಾಕು ಪದಾರ್ಥಗಳನ್ನು ಸೇವಿಸುವುದರಿಂದ ಅನೇಕ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತೇವೆ. ಇದರಿಂದ ಇಡೀ ಕುಟುಂಬವೇ ಸಂಕಷ್ಟಕ್ಕೆ ಎದುರಾಗಲಿದೆ. ಆದ್ದರಿಂದ ಯುವಕರು ದುಶ್ಚಟಗಳಿಂದ ದೂರವಿರುವ ಮೂಲಕ ಕುಟುಂಬವನ್ನು ತಾವೆ ರಕ್ಷಣೆ ಮಾಡಿಕೊಳ್ಳಬೇಕು ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದ ಅವರು, ತಂಬಾಕು ಮುಕ್ತವಾಗಲು ಕಾನೂನುಗಳನ್ನು ಕಠಿಣವಾಗಿ ಜಾರಿಗೊಳಿಸಬೇಕು ಮತ್ತು ಸರ್ಕಾರ ದುಶ್ಚಟಗಳಿಗೆ ಕಡಿವಾಣ ಹಾಕಲು ಕ್ರಮವಹಿಸಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ವೈದ್ಯ ಹಾಲಸ್ವಾಮಿ ಮಾತನಾಡಿ, ಭಾರತದಾದ್ಯಂತ ರಾಷ್ಟ್ರೀಯ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಗುಲಾಬಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಪದಾರ್ಥಗಳಿಂದ ಅನೇಕ ಕಾಯಿಲೆಗಳು ಹುಟ್ಟುತ್ತವೆ. ಆನಂತರ ದೀರ್ಘಕ್ಕೆ ಹೋಗಿ ಸಾವಿಗೆ ಆಹ್ವಾನಿಸುತ್ತವೆ. ಆದ್ದರಿಂದ ಯಾವುದೇ ರೀತಿಯ ತಂಬಾಕು ವ್ಯಸನದಿಂದ ಹೊರಬಂದು ಉತ್ತಮ ಪೌಷ್ಟಿಕ ಆಹಾರವನ್ನು ಪಡೆಯುವ ಮೂಲಕ ದೈಹಿಕವಾಗಿ ಸಮರ್ಥರಾದರೆ ಸಮಾಜದ ಅಭಿವೃದ್ಧಿ ಸಹ ಆಗಲಿದೆ ಎಂದು ಹೇಳಿದರು.

ಪ್ರತಿ ಶೆಡ್‌, ಗೂಡಂಗಡಿಗಳಿಗೆ ತೆರಳಿದ ಜಾಥಾದ ಸದಸ್ಯರು ಗುಲಾಬಿ ಹೂವನ್ನು ನೀಡಿ ತಂಬಾಕು ಆರೋಗ್ಯಕ್ಕೆ ಹಾನಿಕರ ಎಂದು ಎಚ್ಚರಿಸಿದರು.

ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಎಚ್. ಗೌರಮ್ಮ, ಭುವನೇಶ್ವರಿ, ವಕೀಲರಾದ ಎಂ. ಮೃತ್ಯುಂಜಯ, ನಳಿನಕುಮಾರಿ, ಸಿ. ನಾಗರಾಜ ನಾಯ್ಕ, ಎಸ್‌ಸಿಎಸ್ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಶಂಕ್ರಯ್ಯ ಪಾಲ್ಗೊಂಡಿದ್ದರು.

7ಎಚ್‌ ಆರ್ ಪಿ 1