ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮ

| Published : Sep 29 2025, 03:02 AM IST

ಸಾರಾಂಶ

ಅ.6ರಂದು ಸಿಎಂ ಸಿದ್ದರಾಮಯ್ಯ ಕೊಪ್ಪಳಕ್ಕೆ ಅನೇಕ ಕಾಮಗಾರಿಗಳ ಶಂಕು ಸ್ಥಾಪನೆಗೆ ಆಗಮಿಸುವ ವೇಳೆ ಆಸ್ಪತ್ರೆ ಉದ್ಘಾಟಿಸಲಿದ್ದಾರೆ

ಕುಷ್ಟಗಿ: ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಹಿಂದೆ ನೂತನವಾಗಿ ನಿರ್ಮಾಣಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ವಾರ್ಡ್‌,ಆಪರೇಷನ್ ಥೇಟರ್ ಸೇರಿದಂತೆ ಅನೇಕ ಕೊಠಡಿಗಳನ್ನು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಷ್ಟಗಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ಅ.6ರಂದು ಸಿಎಂ ಸಿದ್ದರಾಮಯ್ಯ ಕೊಪ್ಪಳಕ್ಕೆ ಅನೇಕ ಕಾಮಗಾರಿಗಳ ಶಂಕು ಸ್ಥಾಪನೆಗೆ ಆಗಮಿಸುವ ವೇಳೆ ಆಸ್ಪತ್ರೆ ಉದ್ಘಾಟಿಸಲಿದ್ದಾರೆ ಎಂದರು.

ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸುವುದರ ಸಲುವಾಗಿ ರಾಜ್ಯ ಸರ್ಕಾರ ಸುಮಾರು 1800ಕ್ಕೂ ಅಧಿಕ ಎಂಬಿಬಿಎಸ್ ವೈದ್ಯರ ನೇಮಕಾತಿ ಮಾಡಿಕೊಂಡಿದ್ದು, ಈಗಾಗಲೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಎಲ್ಲ ತಾಲೂಕಾಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ, ಅರವಳಿಕೆ ಮತ್ತು ಚಿಕ್ಕಮಕ್ಕಳ ತಜ್ಞರನ್ನು ಇಬ್ಬರಂತೆ ನೇಮಕ ಮಾಡಲಾಗುತ್ತದೆ ಮತ್ತು ಎಲ್ಲ ಕಡೆ ಒಬ್ಬ ರೇಡಿಯಾಲಾಜಿಸ್ಟ್ ಹುದ್ದೆ ಸೃಷ್ಟಿಸಲಾಗುತ್ತದೆ. ಹೆಚ್ಚುವರಿಯಾಗಿ ಸ್ಟಾಫ್ ನರ್ಸ್‌ಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದರು.

ಎಲ್ಲ ತಾಲೂಕಾಸ್ಪತ್ರೆಯಲ್ಲಿ ಡಯಾಲಿಸ್ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಸದ್ಯ ಹೊಸ ತಾಲೂಕುಗಳಿಗೆ 15 ಡಯಾಲಿಸಿಸ್ ಕೇಂದ್ರ ತೆರೆಯಲು ಟೆಂಡರ್ ಕರೆಯಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುವ ಸಲುವಾಗಿ ಕಲ್ಯಾಣ ಕರ್ನಾಟಕದಲ್ಲಿ ₹850 ಕೋಟಿ ವೆಚ್ಚದಲ್ಲಿ ಅನೇಕ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ರಾಜ್ಯದಲ್ಲಿ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಧರ್ಮಸ್ಥಳ ಪ್ರಕರಣ:ಧರ್ಮಸ್ಥಳ ಬುರುಡೆ ಪ್ರಕರಣದ ಸತ್ಯಾಂಶ ಹೊರ ತೆಗೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸಮೀಕ್ಷೆಯು ಪ್ರತಿ 10 ವರ್ಷಕ್ಕೊಮ್ಮೆ ಮಾಡಬೇಕಾಗುತ್ತದೆ ಸಮೀಕ್ಷೆ ಕಾರ್ಯ ಮಾಡುತ್ತಿರುವುದರಿಂದ ರಾಜ್ಯದ ಜನತೆಯ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಅನೂಕೂಲವಾಗುತ್ತದೆ. ಇದರಿಂದ ಸರ್ಕಾರ ಯೋಜನೆ ಜಾರಿಗೆ ತರಬೇಕಾದರೆ ನಿಖರವಾದ ವೈಜ್ಞಾನಿಕ ಮಾಹಿತಿ ಸಿಗುತ್ತದೆ. ಮೀಸಲಾತಿ ಕೊಡುವ ವಿಚಾರ, ಸಾಮಾಜಿಕ ಕಲ್ಯಾಣ ಯೋಜನೆ ತರಲು ಉಪಯೋಗವಾಗಲಿದೆ ಎಂದು ತಿಳಿಸಿದರು.

ಸಮೀಕ್ಷೆ ಕಾರ್ಯದ ಬಗ್ಗೆ ಬಿಜೆಪಿಯವರಿಗೆ ಜ್ಞಾನದ ಕೊರತೆ ಇದೆ. ವೈಜ್ಞಾನಿಕವಾಗಿ ವಿಚಾರ ಮಾಡುವವರು ಸಮೀಕ್ಷೆ ಬಗ್ಗೆ ತಕರಾರು ಮಾಡುವುದಿಲ್ಲ ಎಂದರು.

ಡಾ.ಕೆ.ಎಸ್.ರೆಡ್ಡಿ ಅವರು ಸುಮಾರು 30ವರ್ಷಗಳ ಕಾಲ ಸೇವೆ ಮಾಡಿದ್ದು, ಅವರನ್ನು ಹೂವಿನ ಹಡಗಲಿಗೆ ವರ್ಗಾವಣೆ ಮಾಡಿದ್ದಾರೆ ಅವರಿಗೆ ಮರು ಆದೇಶ ಮಾಡಿಸುವ ಮೂಲಕ ಕುಷ್ಟಗಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಹಾಗೂ ವೈದ್ಯರು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಪ್ರಭಾರಿ ಮುಖ್ಯ ವೈದ್ಯಾಧಿಕಾರಿ ಡಾ.ಚಂದ್ರಕಲಾ, ಟಿಎಚ್ಒ ಡಾ.ಆನಂದ ಗೋಟೂರು ಸೇರಿದಂತೆ ಅನೇಕರು ಇದ್ದರು.