ಕನ್ನಡಪ್ರಭ ವಾರ್ತೆ ಚನ್ನಮ್ಮ ಕಿತ್ತೂರು

ರಾಜ್ಯ ಸರ್ಕಾರದ ವತಿಯಿಂದ ಅನೇಕ ಜನಪರ‌‌ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದ ಜನರ ಜೀವನ‌ಮಟ್ಟ ಸುಧಾರಿಸುವ ಕಾರ್ಯವಾಗುತ್ತಿದೆ. ಚನ್ನಮ್ಮ‌ ಕಿತ್ತೂರಿನಲ್ಲಿ ಉದ್ಘಾಟನೆಗೊಂಡಿರುವ ಹೊಸ ಬಸ್ ಘಟಕದಿಂದ ಈ ಭಾಗದ ಗ್ರಾಮೀಣ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಚನ್ನಮ್ಮನ‌ ಕಿತ್ತೂರು ನೂತನ ಬಸ್ ಘಟಕದ ಆವರಣದಲ್ಲಿ ಸೋಮವಾರ ಚನ್ನಮ್ಮನ‌ಕಿತ್ತೂರು ನೂತನ‌ ಬಸ್ ಘಟಕ‌ ಉದ್ಘಾಟಿಸಿ, ಹೊಸ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಚನ್ನಮ್ಮನ ಕಿತ್ತೂರಿನ‌ಲ್ಲಿ ಅಂದಾಜು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದಂತಹ ಸುಸಜ್ಜಿತ ನೂತನ ಬಸ್ ಘಟಕದಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು. ಕಳೆದ ಬಾರಿ ಸಾರಿಗೆ ಸಚಿವರಾಗಿದ್ದ ಸಮಯದಲ್ಲೂ‌ ಅನೇಕ‌ ಬಸ್‌ ನಿಲ್ದಾಣಗಳನ್ನು ‌ನಿರ್ಮಾಣ‌ ಮಾಡಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅನುಕಂಪದ‌ ಆಧಾರದ ಮೇಲೆ‌ ಹತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಹೊಸದಾಗಿ ನಿರ್ಮಾಣವಾದ ಚನ್ನಮ್ಮನ ಕಿತ್ತೂರು ಬಸ್ ಘಟಕಕ್ಕೆ ಹದಿನೈದು ಹೊಸ ಬಸ್‌ಗಳನ್ನು ನೀಡಲಾಗಿದೆ. ಈ ಬಸ್‌ಗಳನ್ನು ಗ್ರಾಮೀಣ ಭಾಗದ ಜನರಿಗೆ ಹಾಗೂ ಮುಖ್ಯವಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಿದರು.ಶಾಸಕರಾದ ಬಾಬಾಸಾಹೇಬ ಪಾಟೀಲ ಮಾತನಾಡಿ, ಚನ್ನಮ್ಮನ ಕಿತ್ತೂರಿನಲ್ಲಿ ನೂತನ ಬಸ್ ಘಟಕ‌ ನಿರ್ಮಾಣದ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಚನ್ನಮ್ಮನ ಕಿತ್ತೂರು ಐತಿಹಾಸಿಕ ಸ್ಥಳವಾಗಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದು ಹಾಗೂ ಗ್ರಾಮೀಣ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದೊಂದಿಗೆ ಈ ಘಟಕ ಆರಂಭಿಸಲಾಗಿದೆ ಎಂದರು.ಚನ್ನಮ್ಮನ ಕಿತ್ತೂರು ಬಸ್ ನಿಲ್ದಾಣದಲ್ಲಿನ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಅನುದಾನ ಹಾಗೂ ಈ ಭಾಗದಲ್ಲಿ ಸ್ಥಳೀಯವಾಗಿ ಸುಗಮ‌ ಸಂಚಾರಕ್ಕೆ ಹೊಸ ಮಿನಿ ಬಸ್‌ಗಳನ್ನು‌ ಪೂರೈಸಲು ಸಾರಿಗೆ ಸಚಿವರಲ್ಲಿ ಪಾಟೀಲ ಅವರು ಮನವಿ ಮಾಡಿದರು.ವಾ.ಕ.ರ.ಸಾ.ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ವಾಕರಸಾ ಸಂಸ್ಥೆ ವ್ಯವಸ್ಥಾಪಕ‌‌ ನಿರ್ದೇಶಕಿ ಪ್ರಿಯಾಂಗಾ ಎಂ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು, ಸಾರ್ವಜನಿಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಈ ವರ್ಷ ಒಟ್ಟು 450 ನೂತನ ಬಸ್‌ಗಳನ್ನು ಸಾರ್ವಜನಿಕರ ಸಂಚಾರಕ್ಕೆ ನೀಡಲಾಗಿದೆ. ಅಲ್ಲದೆ ಇನ್ನೂ 300 ಬಸ್‌ಗಳು ಬಾಕಿ ಇದ್ದು ಅವುಗಳನ್ನು ಸಹ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಕಳೆದ 3 ವರ್ಷಗಳ ಅವಧಿಯಲ್ಲಿ 1200 ಹೊಸ ಬಸ್‌ಗಳನ್ನು‌ ನೀಡಲಾಗಿದೆ. ಬೆಳಗಾವಿಯ ಕೇಂದ್ರ ಹಾಗೂ ನಗರ ಬಸ್‌ ನಿಲ್ದಾಣಗಳನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಚನ್ನಮ್ಮ ಕಿತ್ತೂರಿನ ಹೊಸ ಬಸ್ ಘಟಕದಲ್ಲಿ‌ ಕಾಂಕ್ರಿಟ್ ಕಾಮಗಾರಿಯನ್ನು ಶೀಘ್ರವೇ ಕೈಗೊಳ್ಳಲಾಗುವುದು.

-ರಾಮಲಿಂಗಾರೆಡ್ಡಿ, ಸಚಿವರು.ಮುಂಚೆ ಈ ಭಾಗದ ಗ್ರಾಮೀಣ ವಿಧ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಲು ತುಂಬಾ ಅನಾನುಕೂಲವಾಗುತ್ತಿತ್ತು. ಇಂದು ಚನ್ನಮ್ಮನ ಕಿತ್ತೂರಿನ ಹೊಸ ಬಸ್ ಘಟಕಕ್ಕೆ ಹದಿನೈದು ಹೊಸ ಬಸ್‌ಗಳನ್ನು ನೀಡಲಾಗಿದ್ದು, ಇದರಿಂದಾಗಿ ಈ ಭಾಗದ ಗ್ರಾಮೀಣ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ‌ ಸಾರಿಗೆ ವ್ಯವಸ್ಥೆ ನೀಡಲಾಗುವುದು.

-ಬಾಬಾಸಾಹೇಬ ಪಾಟೀಲ,


ಶಾಸಕರು.