ತಾಲೂಕಿನ ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ೬೬ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡದ ಭೂಮಿ ಪೂಜೆ
ಕನ್ನಡಪ್ರಭ ವಾರ್ತೆ ಶಿರಾ
ತಾಲೂಕಿನಲ್ಲಿ ಜನತೆಯ ಆರೋಗ್ಯದ ದೃಷ್ಟಿಯಿಂದ ಜಯದೇವ ಹೃದ್ರೋಗ ಸಂಸ್ಥೆ ಉಪಕೇಂದ್ರ ಪ್ರಾರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಿದ್ದು ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ತಾಲೂಕಿನ ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ೬೬ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ೨೨ ನಗರ ಆರೋಗ್ಯ ಕೇಂದ್ರಗಳಿಗೆ ಹಣ ಮಂಜೂರಾಗಿದ್ದು ಅದರಲ್ಲಿ ಶಿರಾ ನಗರ ಕೇಂದ್ರದ ಹೊಸ ಕಟ್ಟಡಕ್ಕೆ ಹಣ ಬಿಡುಗಡೆಯಾಗಿದೆ. ಹಾಗೂ ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಅನುಮೋದನೆ ಹಂತದಲ್ಲಿ ಇದೆ. ಅಲ್ಲದೆ ಬೇವಿನಹಳ್ಳಿ ಗ್ರಾಮದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಶೀಘ್ರವಾಗಿ ಮಂಜೂರಾಗಲಿದೆ. ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರಕ್ಕೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಿ ಜೀವ ಉಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಹುಲಿಕುಂಟೆ ಗ್ರಾಪಂ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಜಯಚಂದ್ರ ಅವರು ಶಾಸಕರಾಗಿ ಅಯ್ಕೆಯಾದ ಬಳಿಕ ಎಲ್ಲಾ ಇಲಾಖೆಯ ಅನುದಾನವನ್ನು ತಂದು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷೆ ರತ್ನಮ್ಮ ಅಜ್ಜಣ್ಣ, ಶಿರಾ ವಕೀಲರ ಸಂಘದ ಅಧ್ಯಕ್ಷ ಗುರುಮೂರ್ತಿ ಗೌಡ ಮುಖಂಡರಾದ ರಾಮಚಂದ್ರಪ್ಪ, ರತ್ನಮ್ಮ ಬಾಲಕೃಷ್ಣ, ಎಂ.ಎನ್.ಗೌಡ, ಪಿಡಿಓ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.