ಬೀದಿ ನಾಯಿ ಹಾವಳಿ ಹತೋಟಿಗೆ ತರಲು ಸಂತಾನ ಶಕ್ತಿ ಹರಣ ಚಿಕಿತ್ಸೆ ಅಗತ್ಯ

| Published : Oct 06 2025, 01:00 AM IST

ಬೀದಿ ನಾಯಿ ಹಾವಳಿ ಹತೋಟಿಗೆ ತರಲು ಸಂತಾನ ಶಕ್ತಿ ಹರಣ ಚಿಕಿತ್ಸೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರೇಬೀಸ್ ಎಂಬುದು ಮನುಷ್ಯ ಮತ್ತು ಪ್ರಾಣಿಗಳ ಮೆದುಳು ಹಾಗೂ ನರಮಂಡಲವನ್ನು ಹಾನಿಗೊಳಿಸುವ ವೈರಸ್ ಆಗಿದೆ. ಮಾರಕ ಕಾಯಿಲೆಯಾದ ರೇಬೀಸ್ ಹಾಗೂ ಹುಚ್ಚುನಾಯಿ ಕಡಿತದಿಂದ ಉಂಟಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಾಕು ನಾಯಿಗಳಿಗೆ ಲಸಿಕೆ ಹಾಕಿಸುವ ಜೊತೆಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮೂಲಕ ಬೀದಿ ನಾಯಿಗಳ ಹಾವಳಿಯನ್ನು ಹತೋಟಿಗೆ ತರಬೇಕಾಗಿದೆ ಎಂದು ಬೆಳ್ಳೂರು ಪಪಂ ಅಧ್ಯಕ್ಷೆ ಲಕ್ಷ್ಮಮ್ಮ ಹೇಳಿದರು.

ತಾಲೂಕಿನ ಬೆಳ್ಳೂರು ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಇಲಾಖೆ ಮತ್ತು ಬೆಳ್ಳೂರು ಪಪಂ ಸಹಭಾಗಿತ್ವದಲ್ಲಿ ವಿಶ್ವ ರೇಬೀಸ್ ದಿನದ ಪ್ರಯುಕ್ತ ಆಯೋಜಿಸಿದ್ದ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ರೋಗದ ವಿರುದ್ಧ ಉಚಿತ ಲಸಿಕೆ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೇಬೀಸ್ ಎಂಬುದು ಮನುಷ್ಯ ಮತ್ತು ಪ್ರಾಣಿಗಳ ಮೆದುಳು ಹಾಗೂ ನರಮಂಡಲವನ್ನು ಹಾನಿಗೊಳಿಸುವ ವೈರಸ್ ಆಗಿದೆ. ಮಾರಕ ಕಾಯಿಲೆಯಾದ ರೇಬೀಸ್ ಹಾಗೂ ಹುಚ್ಚುನಾಯಿ ಕಡಿತದಿಂದ ಉಂಟಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.

ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ಶರತ್‌ರಾಜ್ ಮಾತನಾಡಿ, ವೈರಾಣುವಿನಿಂದ ಬರುವ ರೇಬೀಸ್ ಒಂದು ಮಾರಣಾಂತಿಕ ಕಾಯಿಲೆ. ಇದನ್ನು ಲಸಿಕೆ ಹೊರತು ಪಡಿಸಿದರೆ ಬೇರ್‍ಯಾವುದೇ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿನ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ಲಸಿಕೆ ಹಾಕಿಸಬೇಕೆಂದು ತಿಳಿಸಿದರು.

ವಿಶ್ವ ರೇಬೀಸ್ ದಿನದ ಪ್ರಯುಕ್ತ ಸೆ.28ರಿಂದ ಒಂದು ತಿಂಗಳ ಕಾಲ ತಾಲೂಕಿನ ಎಲ್ಲಾ ಪಶು ವೈದ್ಯಕೀಯ ಕೇಂದ್ರಗಳಲ್ಲಿ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ಉಚಿತವಾಗಿ ರೇಬೀಸ್ ತಡೆಗಟ್ಟುವ ಲಸಿಕೆ ಹಾಕಲಾಗುವುದು. ತಾಲೂಕಿನ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಪಶು ವೈದ್ಯರಾದ ಡಾ. ಕುಮಾರ್, ರಾಘವೇಂದ್ರ ಮತ್ತು ಡಾ. ಆಕಾಶ್ ಅವರು ರೇಬೀಸ್ ರೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು, ಜಾನುವಾರು ಮತ್ತು ಮನುಷ್ಯರಲ್ಲಿ ಕಾಣಿಸಿಕೊಳ್ಳುವ ರೋಗದ ಲಕ್ಷಣಗಳು ಹಾಗೂ ಪ್ರಾಥಮಿಕ ಚಿಕಿತ್ಸೆ ಸೇರಿದಂತೆ ಹಲವು ಮಹತ್ವದ ವಿಷಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಇದೇ ವೇಳೆ ಬೆಳ್ಳೂರು ಪಟ್ಟಣದ ಜನರು ತಮ್ಮ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ಲಸಿಕೆ ಹಾಕಿಸಿದರು.

ಈ ವೇಳೆ ಬೆಳ್ಳೂರು ಪಪಂ ಉಪಾಧ್ಯಕ್ಷ ಮಹಮ್ಮದ್ ಯಾಸೀನ್ ಮಾತನಾಡಿದರು. ಸದಸ್ಯರಾದ ಲ್ಯಾಬ್‌ಮಂಜು, ಮಹತಾಬ್ ಅಹಮದ್, ಮುಖ್ಯಾಧಿಕಾರಿ ಲಕ್ಷ್ಮಣ, ತಾಪಂ ಮಾಜಿ ಸದಸ್ಯ ವೆಂಕಟೇಶ್, ಪಪಂ ಸಿಬ್ಬಂದಿ ರಾಮಚಂದ್ರ, ಪಾಲಾಕ್ಷ, ರಘು, ದೇವರಾಜ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಇದ್ದರು.