ಮಾಯಕೊಂಡ ಸರ್ಕಾರಿ ಬಸ್ ನಿಲ್ದಾಣಕ್ಕೆ ಇನ್ನೂ ಗ್ರಹಣ!

| Published : Sep 30 2025, 12:00 AM IST

ಸಾರಾಂಶ

ಹಳೆಯ ಚಿತ್ರದುರ್ಗ ಜಿಲ್ಲೆಯಿಂದ ವಿಭಜನೆಗೊಂಡು ದಾವಣಗೆರೆ ಹೊಸ ಜಿಲ್ಲೆಯಾಗಿ ರೂಪುಗೊಂಡರೂ ಮಾಯಕೊಂಡ ವಿಧಾನಸಭಾ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿಯೇ ಉಳಿದಿದೆ. ಮುಖ್ಯವಾಗಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬೇಡಿಕೆಗೆ ಹಿಡಿದ ಗ್ರಹಣ ಇನ್ನೂ ಸರಿದಿಲ್ಲ.

- ಆಡಳಿತಾತ್ಮಕ ಮಂಜೂರಾತಿ ದೊರೆತ ತಕ್ಷಣವೇ ಕಾಮಗಾರಿ ಆರಂಭ: ಶಾಸಕ ಬಸವಂತಪ್ಪ ಭರವಸೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಳೆಯ ಚಿತ್ರದುರ್ಗ ಜಿಲ್ಲೆಯಿಂದ ವಿಭಜನೆಗೊಂಡು ದಾವಣಗೆರೆ ಹೊಸ ಜಿಲ್ಲೆಯಾಗಿ ರೂಪುಗೊಂಡರೂ ಮಾಯಕೊಂಡ ವಿಧಾನಸಭಾ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿಯೇ ಉಳಿದಿದೆ. ಮುಖ್ಯವಾಗಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬೇಡಿಕೆಗೆ ಹಿಡಿದ ಗ್ರಹಣ ಇನ್ನೂ ಸರಿದಿಲ್ಲ.

ಪ್ರಸ್ತುತ ಮಾಯಕೊಂಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪ್ರೌಢಶಾಲೆ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ, 4 ಬಾಲಕರ ವಸತಿ ನಿಲಯಗಳು, ನಾಡಕಚೇರಿ, ರೈಲ್ವೆ ನಿಲ್ದಾಣ ಇಷ್ಟೆಲ್ಲಾ ಸರ್ಕಾರಿ ಕಚೇರಿಗಳಿವೆ. ಮಾಯಕೊಂಡಕ್ಕೆ ಪ್ರತಿನಿತ್ಯ ಸಾವಿರಾರು ಜನ ವಿವಿಧ ಕೆಲಸಗಳ ನಿಮಿತ್ತ ಬಂದುಹೋಗುತ್ತಾರೆ. ಹಾಗಿದ್ದರೂ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇಲ್ಲ ಎಂಬ ಕೊರತೆ ಜನರ ಕಾಡುತ್ತಿದೆ.

ಬೆಂಗಳೂರು- ದಾವಣಗೆರೆ- ಹುಬ್ಬಳ್ಳಿ ಮಾರ್ಗವಾಗಿ ನಿತ್ಯ ಹಲವಾರು ರೈಲುಗಳು ಸಂಚರಿಸುತ್ತಿವೆ. ಕೋವಿಡ್ ಹಾವಳಿ ನಂತರ ಈಗ ಆ ರೈಲುಗಳ ಸೇವೆಯೂ ಇಲ್ಲವಾಗಿದೆ. ಇದರಿಂದ ಪ್ರಯಾಣ ದುಸ್ತರವಾಗಿದೆ. 2019ರಲ್ಲಿ ಹಿಂದಿನ ಶಾಸಕ ಲಿಂಗಣ್ಣ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಂಜುರಾಗಿ ಶಿಕ್ಷಣ ಇಲಾಖೆಗೆ ಸೇರಿದ 29 ಗುಂಟೆ ಜಾಗ ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಅನುದಾನವೇ ಬಿಡುಗಡೆ ಆಗಲಿಲ್ಲ. ಐದಾರು ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ.

ಈ ಕುರಿತು ಸ್ಥಳೀಯ ಶಾಸಕ ಕೆ.ಎಸ್‌. ಬಸವಂತಪ್ಪ ಪ್ರತಿಕ್ರಿಯಿಸಿದ್ದು, ಸಿಎಂ ಪ್ರತಿ ಶಾಸಕರಿಗೆ ನೀಡುವ ನೀಡಿರುವ ₹50 ಕೋಟಿ ವಿಶೇಷ ಅನುದಾನದಲ್ಲಿ ₹3 ಕೋಟಿಗಳನ್ನು ಪ್ರಸ್ತುತ ಹೊಸ ಬಸ್ ನಿಲ್ದಾಣಕ್ಕೆ ಮೀಸಲಿಟ್ಟಿದ್ದು, ಆಡಳಿತಾತ್ಮಕ ಮಂಜೂರಾತಿಗೆ ಕಳುಹಿಸಲಾಗಿದೆ. ಅನುಮತಿ ಬಂದ ಕೂಡಲೇ ಟೆಂಡರ್ ಕರೆದು ಹೊಸ ಬಸ್ ನಿಲ್ದಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾರಿಗೆ ಸಚಿವರನ್ನು ಕರೆಸಿ, ಗುದ್ದಲಿ ಪೂಜೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

- - -

(ಬಾಕ್ಸ್‌) * ಭರವಸೆ ಶೀಘ್ರ ಈಡೇರಿಸಿ: ಪ್ರತಾಪ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಂಬಂಧ ಶಾಸಕರು ನೀಡಿರುವ ಹೇಳಿಕೆ ಭರವಸೆಯಾಗಿಯೇ ಉಳಿಯದಿರಲಿ ಎಂದು ರೈತ ಸಂಘಟನೆ ಮುಖಂಡ ಪ್ರತಾಪ ರಾಜಜೋಗಿ ಹೇಳಿದ್ದಾರೆ. ಹೊಸ ಬಸ್ ನಿಲ್ದಾಣವಾದರೆ ಮಾಯಕೊಂಡದಿಂದ ದೂರದ ಊರುಗಳಿಗೆ ಜನರು ಸಂಚರಿಸಲು ಅನುಕೂಲವಾಗುತ್ತದೆ. ಆದಷ್ಟು ಶೀಘ್ರ ಈ ಬೇಡಿಕೆ ಈಡೇರುವಂತಾಗಲಿ ಎಂದು ಆಶಿಸಿದ್ದಾರೆ.

- - -

-14ಕೆಡಿವಿಜಿ33: ಮಾಯಕೊಂಡದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮೀಸಲಿಟ್ಟಿರುವ ಸ್ಥಳ.

-14ಕೆಡಿವಿಜಿ34: ಕೆ.ಎಸ್.ಬಸವಂತಪ್ಪ, ಶಾಸಕ.

-14ಕೆಡಿವಿಜಿ35: ಪ್ರತಾಪ್ ರಾಮಜೋಗಿ

- - -