ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತ ಉಂಟಾಗಿದ್ದು, ಹೆದ್ದಾರಿಯ ಒಂದು ಪಕ್ಕದಲ್ಲಿ ಆಳೆತ್ತರದ ಹೊಂಡ ಸೃಷ್ಟಿಯಾಗಿದೆ. ಇದೀಗ ಅದು ಬೃಹತ್ ಶಿಲಾಯುಗದ ಗುಹಾ ಸಮಾಧಿಯಾಗಿದೆ ಎಂದು ಪುರಾತತ್ವ ತಜ್ಞರು ಹೇಳಿದ್ದಾರೆ.ನಿಟ್ಟೂರು ಪರಿಸರದಲ್ಲಿ ಈ ಹಿಂದೆ ಖ್ಯಾತ ಪುರಾತತ್ವ ತಜ್ಞ ಪ್ರೊ. ಟಿ. ಮುರುಗೇಶಿ ಅವರು 3 ಗುಹಾಸಮಾಧಿಗಳನ್ನು ಪತ್ತೆಹಚ್ಚಿ ಅಧ್ಯಯನ ನಡೆಸಿದ್ದರು.ಇದೀಗ ರಾ.ಹೆ.ಯಲ್ಲಿ ಭಾರಿ ಹೊಂಡ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಸಾಮಾಜಿತ ಜಾಲತಾಣಗಳಲ್ಲಿ ಗಮನ ಸೆಳೆದಿದ್ದರು, ಅದನ್ನು ಗಮನಿಸಿದ ಪ್ರೊ. ಟಿ.ಮುರುಗೇಶಿ ಅವರು ಅದು ಗುಹಾಸಮಾಧಿ ಎಂದು ತಿಳಿಸಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಪುರಾತತ್ವ ವಿಭಾಗದ ವಿದ್ಯಾರ್ಥಿ ಗೌತಮ್ ಎಂಬವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುಮಾರು 3 ಅಡಿ ಅಗಲ, 6 ಅಡಿ ಆಳದ ಈ ಹೊಂಡವನ್ನು ಅವರು ಗುಹಾಸಮಾಧಿ ಎಂದು ಖಚಿತಪಡಿಸಿದ್ದಾರೆ. ಇಲ್ಲಿಯೇ ಸಮೀಪದಲ್ಲಿ ಒಂದು ವೀರಕಲ್ಲು ಕೂಡ ಪತ್ತೆಯಾಗಿದೆ ಎಂದು ಸಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ಪುರಾತತ್ವ ಸ್ಮಾರಕಗಳನ್ನು ರಕ್ಷಿಸಬೇಕಾದರೂ, ಈ ಹೊಂಡ ರಾ.ಹೆ.ಯಲ್ಲಿ ಸೃಷ್ಟಿಯಾಗಿರುವುದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ಪೊಲೀಸರು ಸದ್ಯ ಬ್ಯಾರಿಕೇಡ್ ಇಟ್ಟು ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಗುಹಾಸಮಾಧಿಯಲ್ಲಿ ನೀರು ಒಸರಿ ತುಂಬಿದ್ದು, ಹೆದ್ದಾರಿಗೆ ಇನ್ನಷ್ಟು ಹಾನಿ, ಅಪಾಯ ಸಂಭವಿಸುವ ಮೊದಲೇ ಅದನ್ನು ಮುಚ್ಚಬೇಕು ಎಂದು ಸಾಮಾಜಿಕ ಕಾರ್ಯಕರ್ತರು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.