ಸಾರಾಂಶ
ಮುಂಡಗೋಡದ ಬಸ್ ನಿಲ್ದಾಣದಲ್ಲಿ ಗ್ಯಾರಂಟಿ ಸಮಾವೇಶದಲ್ಲಿ ಬ್ಯಾನರ್ ನಲ್ಲಿ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಅವರ ಭಾವಚಿತ್ರ ಇರುವುದು ಅಚ್ಚರಿಗೆ ಕಾರಣವಾಗಿದೆ.
ಮುಂಡಗೋಡ: ಮಾ. ೧೬ರಂದು ಕಾರವಾರದಲ್ಲಿ ನಡೆಯಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶದ ಕುರಿತು ಮುಂಡಗೋಡ ಬಸ್ ನಿಲ್ದಾಣದಲ್ಲಿ ಅಳವಡಿಸಲಾದ ಬ್ಯಾನರ್‌ನಲ್ಲಿ ಶಾಸಕ ಶಿವರಾಮ ಹೆಬ್ಬಾರ ಭಾವಚಿತ್ರ ಹಾಕಲಾಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಬ್ಯಾನರ್‌ನಲ್ಲಿ ಶಿರಸಿ- ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ ಅವರ ಭಾವಚಿತ್ರ ಇಲ್ಲ. ಆದರೆ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಭಾವಚಿತ್ರ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.ಕಾಂಗ್ರೆಸ್ ಸರ್ಕಾರದ ಈ ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದು, ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಸುದ್ದಿಯಲ್ಲಿರುವ ಶಿವರಾಮ ಹೆಬ್ಬಾರ ಆ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಯೇ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಕಾಡುತ್ತಿದೆ.