ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷ ಗತಿಸಿದರೂ ದೇಶದಲ್ಲಿನ ನಿಜವಾದ ಬಡ ಕೂಲಿಕಾರ್ಮಿಕ, ದಲಿತರ, ಶೋಷಿತರ, ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಜ್ವಲಂತವಾಗಿಯೇ ಉಳಿದಿವೆ.
ಕೊಪ್ಪಳ: ನಗರ ಹಾಗೂ ಜಿಲ್ಲಾಡಳಿತ ಭವನ ಮುಂದೆ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ತಡೆಗಟ್ಟಬೇಕು ಹಾಗೂ ರಾಯಚೂರು ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ನಿರಾಶ್ರಿತ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟಿಸಿ ಜಿಲ್ಲಾಡಳಿತ ಮೂಲಕ ಸಿಎಂಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷ ಗತಿಸಿದರೂ ದೇಶದಲ್ಲಿನ ನಿಜವಾದ ಬಡ ಕೂಲಿಕಾರ್ಮಿಕ, ದಲಿತರ, ಶೋಷಿತರ, ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಜ್ವಲಂತವಾಗಿಯೇ ಉಳಿದಿವೆ. ವಿವಿಧ ಕಡೆಗಳಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಮಾತ್ರವಲ್ಲದೇ ಗ್ರಾಮೀಣ ಭಾಗಗಳಲ್ಲಿ ಅಸ್ಪೃಶ್ಯತೆ ಹೆಚ್ಚಾಗಿದ್ದು, ಜಿಲ್ಲಾಡಳಿತ ದೌರ್ಜ್ಯನ್ಯ ಹಾಗೂ ಅಸ್ಪೃಶ್ಯತೆ ತಡೆಗಟ್ಟಬೇಕು ಹಾಗೂ ಇತ್ತೀಚೆಗೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಮಾದಿಗ ಸಮಾಜದ ಯುವಮುಖಂಡ ಭೂಮಾನಂದ ಅವರನ್ನು ಕೊಲೆಗೈದ ಘಟನೆ ಜರುಗಿದೆ, ಸಮಾಜಸೇವೆಯಲ್ಲಿ ನಿರತನಾಗಿದ್ದ ದಲಿತ ಯುವಕನನ್ನು ಈ ರೀತಿ ಹತ್ಯೆಗೈದಿರುವುದು ಅಮಾನವೀಯ ಕೃತ್ಯವಾಗಿದೆ, ಇದೇ ರೀತಿ ಇದೇ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ತಿಪ್ಪಾರೆಡ್ಡಿ ಎಂಬ ಯುವತಿಯು ಬಯಲು ಶೌಚಾಲಯಕ್ಕೆ ಹೋದಾಗ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವ ಅಮಾನುಷ ಘಟನೆ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಜರುಗಿದೆ.ಕೊಲೆ ಪ್ರಕರಣ ಸರ್ಕಾರ ಸಿಐಡಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಬೇಕು ಹಾಗೂ ಕೊಲೆಗೀಡಾದ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಶೋಷಣೆ. ದೌರ್ಜನ್ಯಕ್ಕೆ ಒಳಗಾಗಿ ಸಂಕಷ್ಟಗಳಿಗೆ ಸಿಲುಕಿರುವ ಹಲವಾರು ದಲಿತ ಕುಟುಂಬ ಇಂದಿಗೂ ವಾಸಿಸಲು ಸೂರು ಇಲ್ಲದೇ ಸರ್ಕಾರಿ ಜಾಗದಲ್ಲಿ ಟೆಂಟ್, ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದು, ಸರ್ಕಾರ ಆ ಕುಟುಂಬಗಳಿಗೆ ಸೂಕ್ತ ಜಾಗ ನೀಡಿ ಹಕ್ಕುಪತ್ರ ನೀಡಬೇಕಾಗಿದೆ. ತಾಲೂಕಿನ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಉಚಿತ ವಸತಿ, ಶುದ್ಧ ಕುಡಿವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಪಂ ವ್ಯಾಪ್ತಿಯ ರಾಜಾಪುರ ಸೀಮಾ ವ್ಯಾಪ್ತಿಯ ಸರ್ವೆ ನಂ 70 ರಲ್ಲಿ 5.18 ಎಕರೆ ಜಮೀನನ್ನು ಗ್ರಾಪಂ ವಶಕ್ಕೆ ಪಡೆದು ಸರ್ವೆ ಹಾಗೂ ಹದ್ದುಬಸ್ತು ಮಾಡಿ, ಪರಿವರ್ತಿಸಿ, ನಿವೇಶನ ರಚಿಸಿ ನಿರಾಶ್ರಿತರಿಗೆ, ದಲಿತ ಕುಟುಂಬಗಳಿಗೆ, ಕೃಷಿಕೂಲಿ ಹಾಗೂ ಕಟ್ಟಡ ಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಜಿಲ್ಲಾಧ್ಯಕ್ಷ ರಮೇಶ ಅಂಗಡಿ, ಉಪಾಧ್ಯಕ್ಷ ತಾಯಪ್ಪ ಗುಂಡೂರು, ಕೃಷ್ಣಪ್ಪ ಸಂಗಾಪುರ, ಪ್ರ.ಕಾ ಯಂಕೋಬ ಮೈಲಾಪುರ, ರಾಘವೇಂದ್ರ ಈಡಿಗೇರ, ಎಸ್. ಆಂಜನೇಯ, ಮರಿಸ್ವಾಮಿ ಹೊಸ್ಕೇರ ಡಗ್ಗಿ, ರೇಣುಕಪ್ಪ ಗುಳದಳ್ಳಿ, ಸುಮಿತ್ರ ಗಾಳೆಮ್ಮಗುಡಿ ಕ್ಯಾಂಪ್, ಮಂಜುನಾಥ , ದ್ಯಾವಣ್ಣ ಗುಂಡೂರು, ನಾಗರಾಜ ವಿನೋಬನಗರ, ಗಾಳೆಪ್ಪ ಕಾರಟಗಿ, ಹುಲುಗಪ್ಪ ಹೊಸ್ಕೇರ ಡಗ್ಗಿ, ದೇವದಾಸ್ ಗಾಳೆಮ್ಮಗುಡಿ ಕ್ಯಾಂಪ್ಹು, ಹುಲಿಗೇಶ ಕುಂಟೋಜಿ ಇತರರಿದ್ದರು.