ಕನ್ನಡಪ್ರಭ ವಾರ್ತೆ ಮದ್ದೂರು

ದಲಿತ ನಾಯಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಬಿಟ್ಟು ಅವರ ಗೌರವ ಮತ್ತು ಘನತೆ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ಎಂ.ಉದಯ ಕಿವಿಮಾತು ಹೇಳಿದರು. ತಾಲೂಕಿನ ಮಾಲಗಾರನಹಳ್ಳಿಯ ಡಾ.ಜಿ.ಪರಮೇಶ್ವರ್ ಸದನದಲ್ಲಿ ಜೈ ಭೀಮ ಗೆಳೆಯರ ಬಳಗದಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತ್ಯುತ್ಸ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಕೆಲವರು ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ ಮಹಾನ್ ನಾಯಕನ ಗೌರವ, ಘನತೆಗೆ ಕುಂದು ಉಂಟಾಗುವ ಕೆಲಸ ನಡೆಯುತ್ತಿವೆ. ಇದಕ್ಕೆ ಸಮುದಾಯದ ನಾಯಕರೇ ಸ್ವಯಂ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದರು.

ಸಾನಿಧ್ಯ ವಹಿಸಿದ್ದ ಮೈಸೂರು ಉರಿಲಿಂಗಿ ಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಡಾ.ಅಂಬೇಡ್ಕರ್ ಕೇವಲ ದಲಿತ ಸಮಾಜ ಮಾತ್ರವಲ್ಲದೆ ಎಲ್ಲಾ ವರ್ಗದ ಜನರಿಗೆ ಸಮ ಸಮಾಜ, ಸಮಾನತೆ ಮತ್ತು ನ್ಯಾಯ ಸ್ಥಾಪನೆಗೆ ತಮ್ಮ ಜೀವನವನ್ನು ಅರ್ಪಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.

ಸಮಾಜ ಕಲ್ಯಾಣ ಇಲಾಖೆ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಲಹೆಗಾರ ಡಾ.ಎಸ್.ತುಕಾರಾಂ ಸಂಪನ್ಮೂಲ ಭಾಷಣ ಮಾಡಿದರು. ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಎಸ್ಪಿ ಗಂಗಾಧರ ಸ್ವಾಮಿ, ಜೈ ಭೀಮ ಗೆಳೆಯರೇ ಬಳಗದ ಅಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಮುಖಂಡರಾದ ಪ್ರಸನ್ನ ಕುಮಾರ್, ರಾಜೇಶ್, ವ್ಯಾಪಸಂದ್ರ ಶಂಕರಲಿಂಗೇಗೌಡ ಮತ್ತಿತರು ಭಾಗವಹಿಸಿದ್ದರು.