ತೆಲಂಗಾಣಕ್ಕೆ ಬಿಡುತ್ತಿರುವ ನೀರು ಸ್ಥಗಿತಗೊಳಿಸಿ

| Published : May 18 2024, 12:34 AM IST / Updated: May 18 2024, 12:35 AM IST

ಸಾರಾಂಶ

ಆಲಮಟ್ಟಿ ಜಲಾಶಯದಿಂದ ಸ್ಥಳೀಯ ರೈತರ ಜಮೀನುಗಳಿಗೆ ನೀರು ಒದಗಿಸದೇ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ ತೆಲಂಗಾಣ ಮೂಲದ ಬಾಡಿಗೆ ರೈತರಿಗೆ ನೀರು ಒದಗಿಸಲಾಗುತ್ತಿದೆ. ಇದಕ್ಕಾಗಿ ಕಳೆದ ಕೆಲದಿನಗಳಿಂದ ಆಲಮಟ್ಟಿ ಜಲಾಯಶಯದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ನದಿ ಪಾತ್ರಕ್ಕೆ ನಿತ್ಯ 2500 ಕ್ಯುಸೆಕ್ ನೀರು ಹರಿಬಿಡಲಾಗುತ್ತದೆ. ಇದನ್ನು ಕೂಡಲೇ ಬಂದ್ ಮಾಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿ ಶುಕ್ರವಾರ ಇಲ್ಲಿಯ ಕೆಬಿಜೆಎನ್ಎಲ್ ಉಪ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಲಮಟ್ಟಿ ಜಲಾಶಯದಿಂದ ಸ್ಥಳೀಯ ರೈತರ ಜಮೀನುಗಳಿಗೆ ನೀರು ಒದಗಿಸದೇ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ ತೆಲಂಗಾಣ ಮೂಲದ ಬಾಡಿಗೆ ರೈತರಿಗೆ ನೀರು ಒದಗಿಸಲಾಗುತ್ತಿದೆ. ಇದಕ್ಕಾಗಿ ಕಳೆದ ಕೆಲದಿನಗಳಿಂದ ಆಲಮಟ್ಟಿ ಜಲಾಯಶಯದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ನದಿ ಪಾತ್ರಕ್ಕೆ ನಿತ್ಯ 2500 ಕ್ಯುಸೆಕ್ ನೀರು ಹರಿಬಿಡಲಾಗುತ್ತದೆ. ಇದನ್ನು ಕೂಡಲೇ ಬಂದ್‌ ಮಾಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿ ಶುಕ್ರವಾರ ಇಲ್ಲಿಯ ಕೆಬಿಜೆಎನ್‌ಎಲ್ ಉಪ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು. ಕುಡಿಯುವ ನೀರಿಗಾಗಿ ಹಾಗೂ ಜಲಚರಗಳಿಗಾಗಿ ಮೀಸಲಿಟ್ಟಿರುವ ನೀರಲ್ಲಿಯೇ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ನೀರು ಹರಿಸಲು ಆರಂಭಿಸಿದ್ದಾರೆ.

ಇದರಿಂದ ಜಿಲ್ಲೆಯ ರೈತರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲದಿನಗಳ ಹಿಂದೆ ವಿಜಯಪುರ ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ಅನುಮತಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು. ಆಯುಕ್ತರ ಆದೇಶದ ಮೇರೆಗೆ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಜಲಾಶಯದ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ನೀರು ಹರಿಸಲಾಗುತ್ತಿದೆ. ಆದರೆ ಬಸವಸಾಗರ ಜಲಾಶಯದ ವ್ತಾಪ್ತಿಯಲ್ಲಿ ತೆಲಂಗಾಣ ಮೂಲದ ಕೆಲವು ರೈತರು ಬಾಡಿಗೆ ಆಧಾರದಲ್ಲಿ ನಮ್ಮ ರೈತರ ಜಮೀನು ಪಡೆದು ಅದರಲ್ಲಿ ನಿಷೇದಿತ ಬೆಳೆಗಳನ್ನು ಬೆಳೆದಿದ್ದಾರೆ. ಈಗ ಅವರಿಗೆ ನೀರು ಬೇಕಾಗಿದ್ದರಿಂದ ರಾಜಕೀಯ ಒತ್ತಡ ಹೇರಿ ನೀರು ಬಿಡಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದರಿಂದ ಈ ವರ್ಷ ಯಾವ ಜಲಾಶಯಗಳೂ ಸಂಪೂರ್ಣ ಭರ್ತಿಯಾಗಿರಲಿಲ್ಲ. ಆದರೆ ಅದೃಷ್ಟವಶಾತ್ ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಆಲಮಟ್ಟಿ ಜಲಾಶಯ ತುಂಬಿದ್ದರೂ ವಿಜಯಪುರ ಜಿಲ್ಲೆಯ ರೈತರು ಬೆಳೆದ ಹಿಂಗಾರು ಬೆಳೆಗಳಿಗೆ ನೀರು ಕೊಡಲಿಲ್ಲ. ಈ ಬಾರಿ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಿಗೆ ಇರುವುದರಿಂದ ಜಿಲ್ಲೆಯ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತಾತ್ವಾರ ಎದುರಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿ ಮೂಲಕ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ. ಆರ್.ಟಿ.ಪಿ.ಎಸ್.ಗೆ ನೀರು ಹರಿಸುವ ನೆಪದಲ್ಲಿ ತೆಲಂಗಾಣಕ್ಕೆ ನೀರು ಬಿಡಲಾಗುತ್ತಿದೆ ಎಂದು ಆರೋಪಿಸಿದರು.

ಶಾಸ್ತ್ರೀ ಜಲಾಶಯದಲ್ಲಿ ನೀರು ಇಲ್ಲವೆಂದು ರೈತರ ಬೆಳೆಗೆ ನೀರು ಕೊಡದ ಸರ್ಕಾರ ಈಗ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ. ನಮ್ಮ ಜಿಲ್ಲೆಯ ರೈತರಿಗೆ ನೀರು ಇಲ್ಲದ ಸಂದರ್ಭದಲ್ಲಿ ನಾರಾಯಣಪುರಕ್ಕೆ ನೀರು ಹರಿಸಿ ರಾಜ್ಯ ಸರ್ಕಾರ ವಿಜಯಪುರ ಜಿಲ್ಲೆಯ ರೈತರಿಗೆ ಮೋಸ ಮಾಡುತ್ತಿದೆ. ಕೂಡಲೇ ನಾರಾಯಣಪುರ ಜಲಾಶಯಕ್ಕೆ ಕೆ.ಪಿ.ಸಿ.ಎಲ್ ಮೂಲಕ ಹರಿಸುತ್ತಿರುವ ನೀರನ್ನು ಬಂದ್‌ ಮಾಡಬೇಕು. ಇಲ್ಲದಿದ್ದರೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಅರವಿಂದ.ಕೆ.ಕುಲಕರ್ಣಿ, ಚನ್ನಪ್ಪ ರಾಠೋಡ, ಸೋಮು ಚೌವ್ಹಾಣ, ರಾಜು ರಾಠೋಡ, ಭೀರು ಇಂಡಿ, ರಮೇಶ ಕುಲಕರ್ಣಿ, ಸಂಜು ಕುಲಕರ್ಣಿ ಗುರುರಾಜ ದೇಶಪಾಂಡೆ ಇತರರು ಇದ್ದರು.

---..17 ಆಲಮಟ್ಟಿ 1