ಕೇಣಿಯ ಸಮುದ್ರ ತೀರದಲ್ಲಿ ಸರ್ವೆ ನಿಲ್ಲಿಸಿ ಮೀನುಗಾರಿಕೆಗೆ ತೆರಳಲು ಅವಕಾಶ ನೀಡಿ : ಪ್ರತಿಭಟನಾಕಾರರು

| N/A | Published : Mar 13 2025, 12:50 AM IST / Updated: Mar 13 2025, 12:31 PM IST

ಕೇಣಿಯ ಸಮುದ್ರ ತೀರದಲ್ಲಿ ಸರ್ವೆ ನಿಲ್ಲಿಸಿ ಮೀನುಗಾರಿಕೆಗೆ ತೆರಳಲು ಅವಕಾಶ ನೀಡಿ : ಪ್ರತಿಭಟನಾಕಾರರು
Share this Article
  • FB
  • TW
  • Linkdin
  • Email

ಸಾರಾಂಶ

ಕೇಣಿಯ ಸಮುದ್ರ ತೀರದಲ್ಲಿ ವಾಣಿಜ್ಯ ಬಂದರೂ ನಿರ್ಮಾಣವಾಗುವುದು ಬೇಡ ಎಂದು ಕಳೆದ 14 ದಿನದ ಹಿಂದೆ ಕೇಣಿಯ ಸಮುದ್ರಕ್ಕೆ ಧುಮುಕಿ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಅಂಕೋಲಾ: ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ಬೃಹತ್ ವಾಣಿಜ್ಯ ಬಂದರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮೀನುಗಾರರು, ಬೇಲೇಕೇರಿಯ ಸಮುದ್ರ ತೀರದಲ್ಲಿ ಮಾನವ ಸರಪಳಿ ನಿರ್ಮಿಸಿ ಮೀನುಗಾರಿಕೆ ಸ್ಥಗಿತಗೊಳಿಸಿ, ಎಲ್ಲ ನಾಡದೋಣಿ ಹಾಗೂ ಬೋಟ್‌ಗಳನ್ನು ಸಮುದ್ರದ ಮಧ್ಯೆ ನಿಲ್ಲಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಕೇಣಿಯ ಸಮುದ್ರ ತೀರದಲ್ಲಿ ವಾಣಿಜ್ಯ ಬಂದರೂ ನಿರ್ಮಾಣವಾಗುವುದು ಬೇಡ ಎಂದು ಕಳೆದ 14 ದಿನದ ಹಿಂದೆ ಕೇಣಿಯ ಸಮುದ್ರಕ್ಕೆ ಧುಮುಕಿ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಜೆಎಸ್‌ಡಬ್ಲ್ಯೂ ಕಂಪನಿಯಿಂದ ಸರ್ವೆ ಕಾರ್ಯ ನಡೆದಿತ್ತು. ಇದರಲ್ಲಿ ಮತ್ತೆ ಅಸಮಾಧಾನಗೊಂಡ ಸಂತ್ರಸ್ತರು ಗ್ರಾಮಸ್ಥರು ಕೇಣಿಯ ಸಮುದ್ರದಲ್ಲೇ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಕೇಣಿಯ ಸಮುದ್ರ ತೀರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ 5 ಕಿ.ಮೀ. ಅಂತರದಲ್ಲಿ ಬೇಲೆಕೇರಿ ಸಮುದ್ರ ತೀರದಲ್ಲಿ ಮಾನವ ಸರಪಳಿ ನಿರ್ಮಿಸಿ ಹಾಗೂ ನೂರಾರು ಸಂಖ್ಯೆಯಲ್ಲಿ ನಾಡದೋಣಿ ಹಾಗೂ ಬೋಟ್‌ಗಳನ್ನು ಸಮುದ್ರಲ್ಲಿ ಸುತ್ತುವರಿದು ಪ್ರತಿಭಟನೆ ನಡೆಸಿದರು.

ಮಾನವ ಸರಪಣಿ:

ಸಮುದ್ರ ತೀರದಲ್ಲಿ ಸಾವಿರಾರು ಮಹಿಳೆಯರು ಮಾನವ ಸರಪಣಿ ನಿರ್ಮಿಸಿದರು. ಯಾವುದೇ ಕಾರಣಕ್ಕೂ ಈ ಬಂದರು ನಿರ್ಮಾಣ ಬೇಡ ಎಂದು ಬಂದರಿನ ವಿರುದ್ಧ ಧಿಕ್ಕಾರ ಕೂಗಿದರು. ಉರಿ ಬಿಸಿಲನ್ನು ಲೆಕ್ಕಿಸದೇ ನಮಗೆ ನ್ಯಾಯ ಕೊಡಿ ಎಂದು ಪ್ರತಿಭಟನೆ ನಡೆಸಿದರು.

ಸುತ್ತಮುತ್ತಲಿನ 500ಕ್ಕೂ ಹೆಚ್ಚು ಬೋಟ್‌ಗಳು ಬೇಲೇಕೇರಿ ಸಮುದ್ರಕ್ಕೆ ಆಗಮಿಸಿದ್ದವು. ಸಮುದ್ರದಲ್ಲಿ ಎಲ್ಲ ಬೋಟ್‌ಗಳನ್ನು ನಿಲ್ಲಿಸಿ ಈ ವಾಣಿಜ್ಯ ಬಂದರನ್ನು ತಡೆಗಟ್ಟಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರಿಕೆ ಸ್ಥಗಿತ:

ಸುತ್ತಮುತ್ತಲಿನ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಆಗಮಿಸಿದ್ದರು. ಮೀನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಂಡ ನಮ್ಮನ್ನು ಒಕ್ಕಲಿಸಬೇಡಿ ಎಂದು ಅಧಿಕಾರಿಗಳಲ್ಲಿ ಮೀನುಗಾರರು ಆಗ್ರಹಿಸಿದರು.

ಸಮುದ್ರದ ಮಧ್ಯದಲ್ಲಿ ಬೋಟ್‌ಗಳನ್ನು ನಿಲ್ಲಿಸಿ ಮೀನುಗಾರರು ಧಿಕ್ಕಾರ ಕೂಗಿದರು. ಸಮುದ್ರದ ಮಧ್ಯದಲ್ಲಿಯೇ ಕುಮಟಾದ ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಲ್ಲಿಯೂ ಸಮಸ್ಯೆಗಳಾಗಬಾರದೆಂದು ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಪೊಲೀಸ್ ತುಕಡಿಗಳನ್ನು ನೇಮಿಸಿದ್ದರು. ಜಿಲ್ಲೆಯ ವಿವಿಧ ಠಾಣೆಗಳಿಂದ ಪೊಲೀಸ್ ನಿರೀಕ್ಷಕರು, ಡಿವೈಎಸ್ಪಿ ಗಿರೀಶ್, ಪೊಲೀಸ್ ಉಪನಿರೀಕ್ಷಕರು, ಅಗ್ನಿಶಾಮಕ ಅಧಿಕಾರಿಗಳು, ಕರಾವಳಿ ಕಾವಲು ಪಡೆಯ ಪೊಲೀಸ್, ಗುಪ್ತಚರ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದರು.

ಶ್ರೀಕಾಂತ ದುರ್ಗೆಕರ, ಉದಯ ವಾಮನ ನಾಯಕ, ರಾಜು ಹರಿಕಂತ್ರ, ವೆಂಕಟೇಶ ದುರ್ಗೆಕರ ಸೇರಿದಂತೆ ಹಲವರು ಇದ್ದರು.