ಸಾರಾಂಶ
ವಿಶೇಷ ವರದಿ
ಹೊನ್ನಾವರ: ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವ ತಾಲೂಕಿನ ಅಪ್ಸರಕೊಂಡ ಪ್ರದೇಶವನ್ನು ಸಮುದ್ರ ಸಂರಕ್ಷಿತ ವಲಯವಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.ಪ್ರಕೃತಿ ಸಂರಕ್ಷಣಾ ಸಂಘದಿಂದ ಸಿದ್ಧಪಡಿಸಲಾದ ೧೧ ಅಪಾಯದಲ್ಲಿರುವ ಅಥವಾ ಅಳಿವಿನಂಚಿನಲ್ಲಿರುವ ಪ್ರಜಾತಿಗಳನ್ನು ಉಳಿಸುವ ಉದ್ದೇಶದಿಂದ ಅಪ್ಸರಕೊಂಡ ರಾಜ್ಯದ ಮೊದಲ ಸಮುದ್ರ ಸಂರಕ್ಷಿತ ವಲಯ ಪ್ರದೇಶ ಎಂದು ಘೋಷಣೆಯಾಗುವ ದಿನ ಹತ್ತಿರಕ್ಕೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಅಂತಿಮ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.
ಎಲ್ಲಿದೆ ಪ್ರದೇಶ, ವಿಶೇಷವೇನು?: ಹೊನ್ನಾವರದಿಂದ ೬ ಕಿಮೀ ಅರಬ್ಬೀ ಸಮುದ್ರದೊಳಗೆ ವಿಸ್ತರಣೆಯಾಗಲಿರುವ ಈ ಸಮುದ್ರ ಸಂರಕ್ಷಣಾ ವಲಯ ಭೂಮಿಯ ಮೇಲ್ಭಾಗದ ಪ್ರದೇಶದಲ್ಲಿ ೮೩೮.೨ ಹೆಕ್ಟೇರ್ ಮತ್ತು ಸಮುದ್ರದಲ್ಲಿ ೫೧೨೪.೩ ಹೆಕ್ಟೇರ್ ವ್ಯಾಪಿಸಿದೆ. ಇದು ಸಮುದ್ರದ ಆಲಿವ್- ರಿಡ್ಲಿ ಆಮೆ, ಮುತ್ತು ಪರಿಸರ, ಕೊಕ್ಕರೆ, ವಲಸೆ ಶಾರ್ಕ್, ಸಮುದ್ರ ಕುದುರೆ ಇವೇ ಮೊದಲಾದ ಪ್ರಾಣಿಗಳು ಮತ್ತು ಸಮುದ್ರ ಜೀವಿಗಳಿಗೆ ಅಶ್ರಯ ನೀಡಿದೆ. ಇವೆಲ್ಲವೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುತ್ತದೆ.ಈ ಸಮುದ್ರ ಸಂರಕ್ಷಿತ ಪ್ರದೇಶವು ೮.೨ ಕಿಮೀ ಉದ್ದವಾಗಿದ್ದು, ಅಧಿಕಾರಿಗಳು ಕಾಸರಕೋಡಿನ ಮರಳು ತೀರಗಳು ಆಲಿವ್ - ರಿಡ್ಲಿ ಆಮೆಯ ಸಂತತಿಗೆ ಹೆಚ್ಚಿನ ಪ್ರಾಶಸ್ತ್ಯದ ಜಾಗವಾಗಿದೆ. ೨೦೨೨ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಮುದ್ರ ಸಂರಕ್ಷಿತ ವಲಯದ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈಗಾಗಲೇ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆದಿದ್ದು, ಆದರೂ ಸಚಿವ ಸಂಪುಟದಲ್ಲಿ ಇದರ ಮಂಡನೆ ಆಗಿರಲಿಲ್ಲ.
ಏನಿದು ಅಪ್ಸರಕೊಂಡ ಸಂರಕ್ಷಿತ ವಲಯ?: ಅಪ್ಸರಕೊಂಡ ವಲಯದಲ್ಲಿ ಅಪರೂಪವಾದ ಆಲಿವ್- ರಿಡ್ಲಿ ಆಮೆಗಳು ಹೆಚ್ಚು ಕಂಡುಬರುತ್ತವೆ. ಹೀಗಾಗಿ ಆಮೆಗಳ ಸಂತತಿ ಉಳಿವಿಗಾಗಿ ಅಪ್ಸರಕೊಂಡವನ್ನು ಸಂರಕ್ಷಿತ ವಲಯವಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಈ ಆಮೆಗಳು ನವೆಂಬರ್, ಡಿಸೆಂಬರ್ ಸಂತಾನೋತ್ಪತ್ತಿಗಾಗಿ ತೀರಕ್ಕೆ ಬಂದು ಮರಳಿನೊಳಗೆ ಮೊಟ್ಟೆ ಇಡುತ್ತವೆ. ಇಂಥ ಸಮಯದಲ್ಲಿ ಮೊಟ್ಟೆಗಳನ್ನು ರಕ್ಷಿಸಲು ಸಂರಕ್ಷಿತ ವಲಯ ಯೋಜನೆಯಡಿ ಆದ್ಯತೆ ನೀಡಲಾಗುತ್ತದೆ. ಸಂರಕ್ಷಿತ ವಲಯ ಮಾಡುವುದರಿಂದ ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆ ಮತ್ತು ಮೀನುಗಾರಿಕೆಗೆ ನಿರ್ಬಂಧ ಹೇರಲಾಗುವುದಿಲ್ಲ.ಮೀನುಗಾರಿಕೆಗೆ ತೊಂದರೆ ಆಗದುಗುಣವಂತೆಯ ಮುಗುಳಿಯಿಂದ ಹೊನ್ನಾವರದ ಪ್ರದೇಶವನ್ನು ಸಮುದ್ರ ಸಂರಕ್ಷಣಾ ವಲಯವಾಗಿ ನಿರ್ಮಿಸಲು ಯೋಚಿಸಲಾಗಿದೆ. ಇಲ್ಲಿ ಮುಗುಳಿ ಕಡಲ ತೀರದಲ್ಲಿ ಕಲ್ಲಿನ ಬಂಡೆಗಳು ಹೆಚ್ಚಿದೆ. ಇಲ್ಲಿ ಆಮೆಯು ಮೊಟ್ಟೆ ಇಡಲು ಸಾಧ್ಯವಿಲ್ಲ. ಕಾಸರಕೋಡಿನ ಟೊಂಕದಲ್ಲಿ ಆಮೆಯ ಸಂತತಿಯನ್ನು ಉಳಿಸುವ ಯೋಗ್ಯ ಸ್ಥಳವಿದೆ. ಪ್ರವಾಸೋದ್ಯಮ ಇಲಾಖೆಯ ಪ್ರಕಾರ ಹೊನ್ನಾವರದಿಂದ ಮುಗುಳಿಯ ಪ್ರದೇಶವನ್ನು ಸಂರಕ್ಷಿತ ವಲಯ ಎಂದು ಮಾಡಬೇಕು ಎಂದಿದೆ. ಆದರೆ ಅಲ್ಲಿನ ಎಲ್ಲ ಪ್ರದೇಶಗಳು ಆಮೆ ಮೊಟ್ಟೆ ಇಡಲು ಸರಿಯಾದ ಸ್ಥಳವಾಗಿಲ್ಲ. ಇನ್ನು ಮೀನುಗಾರರಿಗೂ ಅನುಕೂಲವಾಗುತ್ತದೆ. ಮೀನಿನ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಜತೆಗೆ ಮೀನುಗಾರರ ಮಹಿಳೆಯರಿಗೆ ಸ್ವ ಉದ್ಯೋಗವನ್ನು ನೀಡಬಹುದು. ಸಂರಕ್ಷಿತ ವಲಯ ಎಂದಾಕ್ಷಣ ಮೀನುಗಾರರ ಜಾಗಕ್ಕೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎನ್ನುತ್ತಾರೆ ಪರಿಸರ ತಜ್ಞ ಹಾಗೂ ವನ್ಯಜೀವಿ ಸಂರಕ್ಷಣಾಕಾರ ಎನ್.ಎಂ. ಗುರುಪ್ರಸಾದ್.
ತೊಂದರೆ ಆಗದಿರಲಿ: ಅಪ್ಸರಕೊಂಡವನ್ನು ಸಮುದ್ರ ಸಂರಕ್ಷಿತ ವಲಯವಾಗಿ ಘೋಷಿಸುವುದರಿಂದ ಅನುಕೂಲ ಮತ್ತು ಅನಾನೂಕೂಲಗಳೆರಡು ಇವೆ. ಯೋಜನೆ ಜಾರಿಗೆ ತರುವುದಾದರೆ ಮೀನುಗಾರರನ್ನು ಯೋಜನೆಯಡಿ ಬಳಸಿಕೊಳ್ಳಬೇಕು. ಅಲ್ಲದೇ ಯೋಜನೆಯಿಂದ ಮೀನುಗಾರಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮೀನುಗಾರ ವಿಕಾಸ್ ತಾಂಡೇಲ್ ತಿಳಿಸಿದರು.