ಸಾರಾಂಶ
ಮಕ್ಕಳಿಂದ ಹಿಡಿದು 90ವರ್ಷದ ವೃದ್ಧರವರೆಗೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಸಂಬಂಧಗಳು, ಗುರಿ ಮತ್ತು ಜೀವನದ ವಾಸ್ತವ ಮರೆಯಾಗುತ್ತಿದೆ. ನೈತಿಕ ಮೌಲ್ಯಗಳು, ಮಾನವೀಯತೆ ಕುಸಿಯುತ್ತಿದೆ.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಧನಾತ್ಮಕಕ್ಕಿಂತ ಹೆಚ್ಚು, ನಕಾರಾತ್ಮಕ ಮನೋಭಾವನೆ ಮೂಡಿಸುವ ಮೊಬೈಲ್ ಬಳಕೆ ಬಿಟ್ಟರೆ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಸರಕಾರಿ ಬಾಲಕರ ಪಿಯು ಕಾಲೇಜಿನ ಪ್ರಾಚಾರ್ಯ ಸುದರ್ಶನರೆಡ್ಡಿ ತಿಳಿಸಿದರು.ಪಟ್ಟಣದ ಎಸ್.ವಿ. ಪಿಯು ಕಾಲೇಜು ಆವರಣದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ವತಿಯಿಂದ ನಡೆದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಂದ ಹಿಡಿದು 90ವರ್ಷದ ವೃದ್ಧರವರೆಗೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಸಂಬಂಧಗಳು, ಗುರಿ ಮತ್ತು ಜೀವನದ ವಾಸ್ತವ ಮರೆಯಾಗುತ್ತಿದೆ. ನೈತಿಕ ಮೌಲ್ಯಗಳು, ಮಾನವೀಯತೆ ಕುಸಿಯುತ್ತಿದೆ ಎಂದು ಅವರು ವಿಷಾದಿಸಿದರು.ಚಂದಾಪುರ ಶಿಕ್ಷಕ ಮೊಹ್ಮದ್ ರಫೀಕ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಪ್ರಯತ್ನ ಮತ್ತು ಸಮಯ ಪಾಲನೆ ಮಾಡುವ ಜತೆಗೆ ಗುರಿ ಕೇಂದ್ರೀಕರಿಸಿ ಹೆಚ್ಚು ಓದುವ ಗಿಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಕೋಶಾಧ್ಯಕ್ಷ ಜ್ಞಾನೇಶ್ವರ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ಸಂಸ್ಥೆ ಅಧ್ಯಕ್ಷ ರಘುನಾಥರೆಡ್ಡಿ ಪಾಟೀಲ್ ವಹಿಸಿದ್ದರು. ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಬಿಲ್ಲಾರ್, ಕಾಶೀನಾಥ್, ರಾಘವೇಂದ್ರ, ಬಸವರಾಜ್ ಚಾಪೆಟ್ಲ, ಝಕೀರ್ ಹುಸೇನ್, ನಾಗನಾಥರೆಡ್ಡಿ, ಬಶೀರ್ ಅಹ್ಮದ್, ಬಸವರಾಜ್ ಸಿದ್ದಾರ್ಥ, ಮಹೇಶ್ ಕುಮಾರ, ಸುದರ್ಶನಗೌಡ ಸೇರಿದಂತೆ ಇತರರಿದ್ದರು.