ಕಳೆದ ಮೂರು ದಶಕಗಳಿಂದ ಬಿಜೂರು ರೈಲು ನಿಲ್ದಾಣವನ್ನು ಸಾರ್ವಜನಿಕರ ಬಳಕೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮುಂಬೈ ಹಾಗೂ ಬೆಂಗಳೂರಿಗೆ ಸಂಚರಿಸುವ ರೈಲುಗಳಿಗೆ ಇಲ್ಲಿ ನಿಲುಗಡೆ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಧರಣಿ ಹಾಗೂ ಮನವಿ ಸಲ್ಲಿಸುತ್ತಾ ಬಂದಿದ್ದರೂ ಈವರೆಗೆ ಯಾವುದೇ ಫಲಿತಾಂಶ ದೊರೆತಿಲ್ಲ ಎಂದು ಬಿಜೂರು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ ಪೂಜಾರಿ ಬೇಸರ ವ್ಯಕ್ತಪಡಿಸಿದರು.
ಕುಂದಾಪುರ : ಕಳೆದ ಮೂರು ದಶಕಗಳಿಂದ ಬಿಜೂರು ರೈಲು ನಿಲ್ದಾಣವನ್ನು ಸಾರ್ವಜನಿಕರ ಬಳಕೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮುಂಬೈ ಹಾಗೂ ಬೆಂಗಳೂರಿಗೆ ಸಂಚರಿಸುವ ರೈಲುಗಳಿಗೆ ಇಲ್ಲಿ ನಿಲುಗಡೆ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಧರಣಿ ಹಾಗೂ ಮನವಿ ಸಲ್ಲಿಸುತ್ತಾ ಬಂದಿದ್ದರೂ ಈವರೆಗೆ ಯಾವುದೇ ಫಲಿತಾಂಶ ದೊರೆತಿಲ್ಲ ಎಂದು ಬಿಜೂರು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ ಪೂಜಾರಿ ಬೇಸರ ವ್ಯಕ್ತಪಡಿಸಿದರು.
ಬಿಜೂರು ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಉಪ್ಪುಂದ, ಕೆರ್ಗಾಲು, ನಂದನವನ, ಕಂಚಿಕಾನು, ಕಂಬದಕೋಣೆ, ಹೇರಂಜಾಲು ಹಾಗೂ ಬಿಜೂರು ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಂದಿ ಗ್ರಾಮಸ್ಥರು ಹಾಗೂ ವಿವಿಧ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಬಿಜೂರು ರೈಲು ನಿಲ್ದಾಣದಲ್ಲಿ ರೈಲುಗಳಿಗೆ ನಿಲುಗಡೆ ನೀಡಲು ಹೆಚ್ಚುವರಿ ಸಮಯದ ಅಗತ್ಯವಿಲ್ಲ. ಪ್ರತಿದಿನ ಸುಮಾರು 10ರಿಂದ 12 ಪ್ಯಾಸೆಂಜರ್ ರೈಲುಗಳು ಈಗಾಗಲೇ ರೈಲುಗಳ ಕ್ರಾಸಿಂಗ್‌ಗಾಗಿ ಬಿಜೂರು ನಿಲ್ದಾಣದಲ್ಲಿ ನಿಲ್ಲುತ್ತವೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ರೈಲು ಹತ್ತಲು ಹಾಗೂ ಇಳಿಯಲು ಅವಕಾಶ ಕಲ್ಪಿಸಿದರೆ ನಿಲ್ದಾಣದ ಸದುಪಯೋಗವಾಗಲಿದೆ ಎಂದು ಸುನಿಲ್ ಪೂಜಾರಿ ಹೇಳಿದರು.48 ಎಕರೆ ಕೃಷಿಭೂಮಿ ಸ್ವಾಧೀನ; ನಿಲ್ದಾಣ ಮಾತ್ರ ನಿರುಪಯುಕ್ತ: ದೇಶದ ವಿವಿಧೆಡೆ ಆಧುನಿಕ ರೈಲು ಸೇವೆಗಳನ್ನು ಪರಿಚಯಿಸುವ ಮೂಲಕ ರೈಲ್ವೆ ಇಲಾಖೆ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಬಿಜೂರು ರೈಲು ನಿಲ್ದಾಣ ಮಾತ್ರ 1996ರಿಂದಲೂ ಸಮರ್ಪಕವಾಗಿ ಬಳಕೆಯಾಗದೆ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳೀಯರಾದ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ರೈಲು ನಿಲುಗಡೆಗೆ ಸಂಬಂಧಿಸಿದಂತೆ ಬಿಜೂರು ಹಾಗೂ ಬೈಂದೂರು ನಿಲ್ದಾಣಗಳ ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸುವ ಅಗತ್ಯವಿದೆಎಂದು ಅವರು ಹೇಳಿದರು.ಬೇಡಿಕೆ ಈಡೇರಿಸಲು ಮುತುವರ್ಜಿ: ಶಾಸಕ
ಪ್ರತಿಭಟನಾಕಾರರ ಬೇಡಿಕೆಗಳ ಕುರಿತು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಬಿಜೂರು ರೈಲು ನಿಲ್ದಾಣದ ಸಮಸ್ಯೆ ಹಾಗೂ ಸ್ಥಳೀಯರ ಬೇಡಿಕೆಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಭರವಸೆ ನೀಡಿದರು. ನಂತರ ರೈಲ್ವೆ ಹಿರಿಯ ಟ್ರಾಫಿಕ್ ಇನ್ಸ್‌ಪೆಕ್ಟರ್ ರಾಜೇಶ್ ಶೆಟ್ಟಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸ್ಟೇಷನ್ ಮಾಸ್ಟರ್ ಸಂತೋಷ್, ರೈಲ್ವೆ ಹೋರಾಟ ಸಮಿತಿಯ ಮುಖಂಡರಾದ ಪುಂಡಲೀಕ ಕಿಣಿ ಕಂಚಿಕಾನು, ಡಾ. ಸುಬ್ರಹ್ಮಣ್ಯ ಭಟ್, ಶ್ರೀಶ ಭಟ್, ಹೊಸ್ಕೋಟೆ ವೆಂಕಟೇಶ ರಾವ್ ಮತ್ತಿತರರು ಉಪಸ್ಥಿತರಿದ್ದರು. ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.