ಓದುಗನಿಗೆ ಆಲೋಚನೆಗೆ ಹಚ್ಚುವ ಕತೆಗಳು

| Published : Jan 13 2025, 12:47 AM IST

ಸಾರಾಂಶ

ಲೇಖಕ ರವೀಂದ್ರ ಮುದ್ದಿ ಅವರ "ಸಿಗ್ನಲ್ ಜಂಪ್ " ಕೃತಿಯಲ್ಲಿನ ಹತ್ತು ಕಥೆಗಳು ಓದುಗನನ್ನು ಹೊಸ ಆಲೋಚನೆಗೆ ಹಚ್ಚುತ್ತವೆ.

ಬಳ್ಳಾರಿ: ಲೇಖಕ ರವೀಂದ್ರ ಮುದ್ದಿ ಅವರ "ಸಿಗ್ನಲ್ ಜಂಪ್ " ಕೃತಿಯಲ್ಲಿನ ಹತ್ತು ಕಥೆಗಳು ಓದುಗನನ್ನು ಹೊಸ ಆಲೋಚನೆಗೆ ಹಚ್ಚುತ್ತವೆ. ಸರಳ ಭಾಷೆಯ ಬಳಕೆಯಿಂದಾಗಿ ಕಥೆಗಳ ಸರಾಗ ಓದಿಗೆ ಆಸ್ಪದವಾಗಿದೆ. ಸಿಗ್ನಲ್ ಜಂಪ್ ಕೃತಿ ಆಪ್ತ ಎನಿಸುತ್ತದೆ ಎಂದು ಲೇಖಕ ಸಿದ್ಧರಾಮ ಕಲ್ಮಠ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಹಾಗೂ ಅವ್ವ ಪುಸ್ತಕಾಲಯ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಹೊಸ ಓದು’ ಸಂವಾದ ಕಾರ್ಯಕ್ರಮದಲ್ಲಿ ರವೀಂದ್ರ ಮುದ್ದಿ ಅವರ ‘ ಸಿಗ್ನಲ್ ಜಂಪ್ ‘ ಕಥಾ ಸಂಕಲನದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಕಥಾ ಕಣಜ ಅತ್ಯಂತ ಸಮೃದ್ಧವಾದದ್ದು. ಕಥೆಗಾರರಲ್ಲಿ ಕಥೆ ಹುಟ್ಟುವ, ಜೀವ ಪಡೆಯುವ, ಓದುಗರಿಗೆ ಮಿಡಿಯುವಂತೆ ಮಾಡುವ ಪರಿಯೇ ಸೋಜಿಗವಾದುದು. ಈ ಸಂಕಲನದ ಬಹುಪಾಲು ಪಾತ್ರಗಳು ವ್ಯವಸ್ಥೆಯ ವಿರುದ್ಧ ಪ್ರತಿರೋಧವನ್ನು ಒಡ್ಡುತ್ತವೆ. ನ್ಯಾಯ ಪಡೆಯುತ್ತವೆ. ಇಲ್ಲಿನ ಲೋಕಾನುಭವ, ಬದುಕಿನ ಚಲನಶೀಲತೆ, ಸಶಕ್ತ ಭಾಷೆಯ ಬಳಕೆಯಿಂದ ಕಥೆಗಳನ್ನು ನಿರ್ವಹಿಸಿದ ರೀತಿ ಸೆಳೆಯುತ್ತದೆ ಎಂದರು.

ಇದೇ ವೇಳೆ ಸಿಗ್ನಲ್ ಜಂಪ್ ಕೃತಿಯಲ್ಲಿನ ಕಥೆಗಳಲ್ಲಿ ಬರುವ ಪಾತ್ರಗಳು, ಲೇಖಕನ ಗ್ರಹಿಕೆ, ಸಣ್ಣಸಣ್ಣ ಘಟನೆಗಳನ್ನು ಕಥೆಯನ್ನಾಗಿ ಕಟ್ಟಿಕೊಡುವ ರೀತಿ, ಕಥೆಯ ಗಟ್ಟಿತನ ಹಾಗೂ ಕಥೆಯನ್ನು ಹಿಗ್ಗಿಸದೇ ನೇರವಾಗಿ ಕಥೆ ಹೇಳುವ ಪರಿಯ ಕುರಿತು ವಿವರಿಸಿದ ಸಿದ್ಧರಾಮ ಕಲ್ಮಠ, ಕನ್ನಡ ಕಥಾ ಲೋಕದಲ್ಲಿ ಈ ರೀತಿಯ ಕೃತಿಗಳನ್ನು ಓದುವ ಹಾಗೂ ಕಥನಗಳ ಹಿಂದಿನ ಮತ್ತೊಂದು ಮಗ್ಗಲು ಕುರಿತು ಚರ್ಚಿಸುವ ಕೆಲಸವಾಗಬೇಕು. ಈ ನೆಲೆಯಲ್ಲಿ ಬಳ್ಳಾರಿಯ ಸಾಹಿತ್ಯಾಸಕ್ತರ ಬಳಗ ಹಾಗೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸಿಗ್ನಲ್ ಜಂಪ್ ಕೃತಿಯ ಕುರಿತು ಸಂವಾದಿಸಿದ ಪತ್ರಕರ್ತ ಕೆ.ಎಂ. ಮಂಜುನಾಥ್, ಯಾವುದೇ ಕಥೆ ಓದುಗರನ್ನು ಕಲಕದೆ ಇದ್ದರೆ, ಭಾವನೆಗಳನ್ನು ಅರಳಿಸದೇ ಇದ್ದರೆ ಸಾರ್ಥಕವಾಗುವುದಿಲ್ಲ. ನಮ್ಮ ನಡುವೆ ನಡೆಯುವ ಘಟನೆಗಳಿಗೆ ಕಥೆಗಾರ ಇಲ್ಲಿ ಮುಖಾಮುಖಿಯಾಗುತ್ತಲೇ ಸೃಜನಶೀಲ ಶಕ್ತಿಯನ್ನು ಮೆರೆದಿರುವುದು ಧನಾತ್ಮಕ ಅಂಶ ಎಂದರು.

ನಿತ್ಯದ ತಲ್ಲಣ, ಸಂಬಂಧಗಳ ವಿಘಟನೆ, ಸಾಮಾಜಿಕ ಪ್ರಜ್ಞೆ, ಕುತೂಹಲವನ್ನು ಹುಟ್ಟಿಸುವ ಗುಣ, ನಿತ್ಯ ಜೀವನದಲ್ಲಿ ಸುತ್ತಮುತ್ತಲು ಘಟಿಸುವ ಘಟನೆಗಳ ಸೂಕ್ಷ್ಮ ಗ್ರಹಿಕೆಯಿಂದಾಗಿಯೇ ಕೃತಿ ಹೆಚ್ಚು ಆಪ್ತ ಎನಿಸುತ್ತದೆ. ಕೃತಿಯಲ್ಲಿನ ಬಹುಪಾಲು ಕಥೆಗಳು ಸುಖಾಂತ್ಯ ಮತ್ತು ದುಃಖಾಂತದಿಂದ ಕೊನೆಗೊಳ್ಳುತ್ತವೆ ಎಂದು ಹೇಳಿದರು.

ಲೇಖಕ ರವೀಂದ್ರ ಮುದ್ದಿ ಸಿಗ್ನಲ್ ಜಂಪ್‌ನ ಕೃತಿಯಲ್ಲಿನ ಕಥೆಗಳ ಹುಟ್ಟು ಕುರಿತು ತಿಳಿಸಿದರಲ್ಲದೆ, ಕೃತಿಯ ಬಗ್ಗೆ ಓದುಗರ ಅನುಭವದ ಮಾತುಗಳು ಮತ್ತಷ್ಟು ಕಥೆಗಳ ಬರವಣಿಗೆಗೆ ಪ್ರೋತ್ಸಾಹಿಸಿದೆ ಎಂದರು.

ಪ್ರತಿಕ್ರಿಯೆ ನೀಡಿದ ಅಜಯ ಬಣಕಾರ ರೂಪಕ ಜಗತ್ತಿನೊಂದಿಗೆ, ಸಂವೇದನಾರಹಿತ ಸಮಾಜವನ್ನು ಕಥೆಗಳಲ್ಲಿ ತೆರೆದಿಡುತ್ತಲೇ ಕಥೆಗಾರ ಮನುಷ್ಯ ಸಂಬಂಧಗಳನ್ನು ಎತ್ತಿ ಹಿಡಿದಿದ್ದಾರೆ ಎಂದರು.

ಡಾ. ದಿವ್ಯಾ ಕೆ.ಎನ್. ಮಾತನಾಡಿ, ಸಿಗ್ನಲ್‌ಜಂಪ್ ನ ಕೃತಿಯಲ್ಲಿನ ಕಥೆಗಳು ದಿಕ್ಕು ತಪ್ಪಿದ ಕಥೆಗಳಲ್ಲ. ದಿಕ್ಕು ತೋರಿಸುವ ಕಥೆಗಳು. ನೋವುಂಡವರ, ಕಣ್ಣೀರಿನ ಕಥೆಗಳಲ್ಲ. ಗೆಲುವಿನ ಛಲದ ಕಥೆಗಳು. ಆದರ್ಶ ಮತ್ತು ನೈತಿಕತೆಯನ್ನು ದಾಟಿಸುವ ಅನುಭವ ಕಾಣ್ಕೆಯ ಕಥೆಗಳು ಎಂದು ವಿಶ್ಲೇಷಿಸಿದರು.

ಲೇಖಕ ಡಾ. ಯು.ಶ್ರೀನಿವಾಸಮೂರ್ತಿ ಗ್ರಾಮೀಣ ಜಗತ್ತಿನ ಸಣ್ಣತನ, ಸಂಘರ್ಷ, ಮಾನಸಿಕ ತಳಮಳ, ರಾಜಕೀಯ ಭ್ರಷ್ಟತೆಯನ್ನು ಸೃಜನಶೀಲತೆಯ ಮೂಲಕ ಅನನ್ಯವಾಗಿ ಕಟ್ಟಿಕೊಟ್ಟಿರುವುದು ಇಲ್ಲಿನ ಕಥೆಗಳ ಹೆಚ್ಚುಗಾರಿಕೆಯಾಗಿದೆ ಎಂದು ತಿಳಿಸಿದರು.

ಹೊಸ ಓದು ಸರಣಿಯ ಸಂಚಾಲಕ ಹಾಗೂ ಲೇಖಕ ಡಾ. ಶಿವಲಿಂಗಪ್ಪ ಹಂದಿಹಾಳು ಪ್ರಾಸ್ತಾವಿಕ ಮಾತನಾಡಿ, ಭಿನ್ನ ವೃತ್ತಿಯ,ಭಿನ್ನ ಅಭಿರುಚಿಯ ಲೇಖಕರ ಅನುಭವಗಳನ್ನು ಪರಿಚಯಿಸುವ, ಅವರ ಕೃತಿಗಳೊಂದಿಗೆ ಅನನ್ಯವಾಗಿ ಸಂವಾದಿಸುವ ಒತ್ತಾಸೆಯೇ ಹೊಸ ಓದು ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದು ಹೇಳಿದರು.

ಲೇಖಕರಾದ ದಸ್ತಗೀರಸಾಬ್ ದಿನ್ನಿ, ವೀರೇಂದ್ರ ರಾವಿಹಾಳ, ಸುಮಾ ಗುಡಿ, ದಿನೇಶ ಗುಡಿ, ಚಂದ್ರಶೇಖರ್ ಆಚಾರಿ ಕಪ್ಪಗಲ್, ವಾಣಿ ಬಣಕಾರ, ಪಿ.ಆರ್. ವೆಂಕಟೇಶ್, ಚಾಂದಪಾಷಾ ರಡ್ಡೋಲಿ, ಪಂಪಾಪತಿ, ಬಸವರಾಜ, ಚಾಂದಪಾಷ ತೆಕ್ಕಲಕೋಟೆ, ವಿ.ಬಿ. ಮಲ್ಲಪ್ಪ ಭಾಗವಹಿಸಿದ್ದರು.

ಡಾ.ನಾಗರಾಜ ಬಸರಕೋಡು, ಲೇಖಕ ವೀರೇಂದ್ರ ರಾವಿಹಾಳ್, ದಸ್ತಗೀರ್ ಸಾಬ್ ದಿನ್ನಿ ಹಾಗೂ ಕರ್ಣ ಬಣಕಾರ ಕಾರ್ಯಕ್ರಮ ನಿರ್ವಹಿಸಿದರು.