ಕನ್ನಡಪ್ರಭ ವಾರ್ತೆ ಕಾರವಾರ
ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಹಾಗೂ ಅಲೆಗಳ ಅಬ್ಬರ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡುತ್ತಿದ್ದಂತೆ ಮೀನುಗಾರಿಕಾ ಬೋಟುಗಳು ಬೈತಖೋಲ ಬಂದರಿನಲ್ಲಿ ಲಂಗರು ಹಾಕಿವೆ.ಮುಂದಿನ 48 ಗಂಟೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಗಾಳಿ ಹಾಗೂ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಹಾಗೂ ಪ್ರವಾಸಿಗರಿಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.ಈ ಹಿನ್ನೆಲೆ ಕುಮಟಾ, ಭಟ್ಕಳ ಹಾಗೂ ಮಲ್ಪೆಯ ಮೀನುಗಾರಿಕಾ ಬೋಟ್‌ಗಳು ಕಾರವಾರ ಬಂದರಿನಲ್ಲಿ ಆಶ್ರಯ ಪಡೆದಿವೆ.
ಗಂಟೆಗೆ 50ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೂ ಎಚ್ಚರಿಕೆ ನೀಡಲಾಗಿದೆ. ಇದರಿಂದ ಕರಾವಳಿಯ ಕಡಲ ತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೂ ಹಿನ್ನಡೆ ಉಂಟಾಗಲಿದೆ.ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧೆಡೆ ಬಿರುಗಾಳಿ, ಮಳೆ ಉಂಟಾಗುತ್ತಿದೆ. ಇದರಿಂದ ಈಗಾಗಲೇ ಮೀನುಗಾರಿಕಾ ಚಟುವಟಿಕೆಗೆ ಹಿನ್ನಡೆ ಉಂಟಾಗಿತ್ತು.ಅಪ್ಸರಕೊಂಡ ಕಡಲತೀರದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವುಹೊನ್ನಾವರ ತಾಲೂಕಿನಲ್ಲಿ ಶನಿವಾರವೂ ಮಳೆ ಅಬ್ಬರಿಸಿದೆ. ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಓರ್ವ ಮೃತಪಟ್ಟ ಘಟನೆ ನಡೆದಿದೆ.ಅಪ್ಸರಕೊಂಡದ ಕಡಲತೀರದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಓರ್ವ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.ಅಪ್ಸರಕೊಂಡದ ವಿನಾಯಕ ಖಾರ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಸುರಿದ ಗುಡುಗು-ಸಿಡಿಲಿನೊಂದಿಗೆ ಭಾರಿ ಮಳೆ ಮತ್ತು ಗಾಳಿಗೆ ಅಪ್ಸರಕೊಂಡದ ಬೀಚಿನ ಹತ್ತಿರದಲ್ಲಿರುವ ಸಮುದ್ರದಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಸಮಯದಲ್ಲಿ ಅವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಅಪ್ಸರಕೊಂಡ ಬೀಚಿನ ಗುಡ್ಡದ ಹತ್ತಿರ ನಡೆದ ಇನ್ನೊಂದು ಪ್ರಕರಣದಲ್ಲಿ ಸಿಡಿಲು ಬಡಿದು ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಥಳದಲ್ಲಿದ್ದ ಪ್ರವಾಸಿಗರು, ಫೋಟೋಗ್ರಾಪರ್‌ಗಳು ಸಿಡಿಲಿನ ಆಘಾತಕ್ಕೆ ಒಳಗಾಗಿದ್ದು, ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ ಕರಾಂಡೆ, ಕಂದಾಯ ಇಲಾಖೆಯ ಅಧಿಕಾರಿ ವಿನಯ ಪಂಡಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.