ಸಾರಾಂಶ
ಸದ್ಗುರು ಹಾಗೂ ಮಂಜುಶ್ರೀ ಎಂಬ ಟ್ರಾಲ್ ಬೋಟ್‌ಗಳು ಮೀನುಗಾರಿಕೆಗೆ ತೆರಳಿದ ವೇಳೆ ಹೂಳಿಗೆ ಅಪ್ಪಳಿಸಿದ್ದು, ದಡಕ್ಕೆ ತರಲು ಕಾರ್ಯಾಚರಣೆ ಮುಂದುವರಿದಿದೆ. ಆದರೆ ಒಂದು ಬೋಟ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.
ಗೋಕರ್ಣ: ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ಗಳು ಶುಕ್ರವಾರ ಬೆಳಗಿನ ಜಾವ ತದಡಿ ಬಳಿ ಅಘನಾಶಿನಿ ನದಿ ಸಮುದ್ರ ಸೇರುವ ಅಳಿವೆಯ ಹೂಳಿನಲ್ಲಿ ಸಿಲುಕಿದ್ದು, ಅಪಾಯದಲ್ಲಿದ್ದ 10 ಜನ ಮೀನುಗಾರರನ್ನು ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ.
ಸದ್ಗುರು ಹಾಗೂ ಮಂಜುಶ್ರೀ ಎಂಬ ಟ್ರಾಲ್ ಬೋಟ್‌ಗಳು ಮೀನುಗಾರಿಕೆಗೆ ತೆರಳಿದ ವೇಳೆ ಹೂಳಿಗೆ ಅಪ್ಪಳಿಸಿದ್ದು, ದಡಕ್ಕೆ ತರಲು ಕಾರ್ಯಾಚರಣೆ ಮುಂದುವರಿದಿದೆ. ಆದರೆ ಒಂದು ಬೋಟ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಲೈಫ್ ಜಾಕೆಟ್ ಮತ್ತಿತರ ಪರಿಕರ ನೀಡಿ ೧೦ಕ್ಕೂ ಹೆಚ್ಚು ಮೀನುಗಾರರನ್ನು ಕರಾವಳಿ ಕಾವಲು ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ದಡಕ್ಕೆ ಸೇರಿಸಿ ಜೀವ ಉಳಿಸಿದ್ದಾರೆ.ಮೀನುಗಾರಿಕೆಗೆ ಸಂಕಷ್ಟ: ಅಳಿವೆಯಲ್ಲಿನ ಹೂಳು ತೆಗೆದು ಮೀನುಗಾರಿಕಾ ಬೋಟ್ ತೆರಳಲು ಅನುಕೂಲ ಮಾಡಿಕೊಡಬೇಕು. ತದಡಿ ಬಂದರು ಅಭಿವೃದ್ಧಿಪಡಿಸಬೇಕು ಎಂದು ಹಲವು ದಶಕಗಳಿಂದ ಇಲ್ಲಿನ ಮೀನುಗಾರರು ಸರ್ಕಾರಕ್ಕೆ ಮನವಿ ನೀಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೀನುಗಾರರ ಮುಖಂಡ ಉಮಾಕಾಂತ ಹೊಸ್ಕಟ್ಟ ಮಾತನಾಡಿ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದೇವೆ. ಅದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಬಡ ಮೀನುಗಾರರ ಬದುಕಿಗೆ ನೆರವಾಗಬೇಕಾದ ಸರ್ಕಾರ ಮಾರಕ ಯೋಜನೆಗಳನ್ನು ತರಲು ಹವಣಿಸುತ್ತಿದೆ ಎಂದು ಆರೋಪಿಸಿದರು.