ಮಂಟರಘಟ್ಟದಲ್ಲಿ ಬೀದಿನಾಯಿಗಳ ದಾಳಿ: 10 ಕುರಿ, ಮೇಕೆಗಳ ಸಾವು

| Published : Jul 26 2025, 12:00 AM IST

ಸಾರಾಂಶ

ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿನ ಕುರಿಯ ರಪ್ಪಕ್ಕೆ ಬೀದಿನಾಯಿಗಳು ನುಗ್ಗಿ 10 ಕುರಿ ಮತ್ತು ಮೇಕೆಗಳನ್ನು ಕಚ್ಚಿ ಕೊಂದಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಚನ್ನಗಿರಿ: ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿನ ಕುರಿಯ ರಪ್ಪಕ್ಕೆ ಬೀದಿನಾಯಿಗಳು ನುಗ್ಗಿ 10 ಕುರಿ ಮತ್ತು ಮೇಕೆಗಳನ್ನು ಕಚ್ಚಿ ಕೊಂದಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಗ್ರಾಮದ ಕರಿಯಪ್ಪ ಎಂಬವರು ಮನೆ ಪಕ್ಕದಲ್ಲಿ ಕುರಿಯನ್ನು ಕೂಡಿ ಹಾಕಲು ರಪ್ಪ (ಕೊಟ್ಟಿಗೆ) ಮಾಡಿದ್ದರು. ಕೊಟ್ಟಿಗೆಯಲ್ಲಿ 15 ಕುರಿ ಮತ್ತು ಮೇಕೆಗಳನ್ನು ಸಾಕಿದ್ದರು. ಗ್ರಾಮದ 7 ಬೀದಿನಾಯಿಗಳು ಕುರಿ ತುಂಬಿದ್ದ ರಪ್ಪಕ್ಕೆ ನುಗ್ಗಿ ಕುರಿ-ಮೇಕೆಗಳ ಮೇಲೆ ದಾಳಿ ನಡೆಸಿವೆ. ಪರಿಣಾಮ 10 ಕುರಿ-ಮೇಕೆಗಳು ಬಲಿಯಾಗಿವೆ.

ಬೀದಿನಾಯಿಗಳ ಅರಚಾಟ, ಕುರಿಗಳ ಒದರಾಟ ಕೇಳಿ ಅಕ್ಕಪಕ್ಕದ ಮನೆಯವರು ಕೂಡಲೇ ಧಾವಿಸಿ, ಬೀದಿನಾಯಿಗಳನ್ನು ಓಡಿಸಿದ್ದಾರೆ. ಅಷ್ಟೋತ್ತಿಗಾಗಲೇ 10 ಕುರಿ-ಮೇಕೆಗಳು ನಾಯಿಗಳ ಕಡಿತದಿಂದ ಮೃತ ಪಟ್ಟಿದ್ದವು ಎಂದು ಗ್ರಾಮದ ಪ್ರತ್ಯಕ್ಷದರ್ಶಿ ಪರಶುರಾಮ್ ತಿಳಿಸಿದ್ದಾರೆ.

6 ತಿಂಗಳ ಹಿಂದಷ್ಟೇ ಇದೇ ಗ್ರಾಮದ ಕೃಷ್ಣಮೂರ್ತಿ ಎಂಬವರ 7 ಕುರಿಗಳನ್ನು ಬೀದಿನಾಯಿಗಳು ಕಚ್ಚಿ ಸಾಯಿಸಿದ್ದವು. ಆಗ ಈ ಬೀದಿನಾಯಿಗಳನ್ನು ಸೆರೆಹಿಡಿಯುವಂತೆ ಗ್ರಾಮಾಡಳಿತದ ಅಧಿಕಾರಿಗಳಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ, ಬೀದಿನಾಯಿಗಳ ಹಿಡಿಯದ ಪರಿಣಾಮ ಈಗ ಮತ್ತೆ ಕುರಿ-ಮೇಕೆಗಳು ಬಲಿಯಾಗಿವೆ.

- - -

-25ಕೆಸಿಎನ್‌ಜಿ1.ಜೆಪಿಜಿ: ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿರುವ ಕುರಿ-ಮೇಕೆಗಳು.