ಸಾರಾಂಶ
ಮಕ್ಕಳು, ವಯೋವೃದ್ಧರು, ವಾಯು ವಿಹಾರಿಗಳಿಗೆ ತೊಂದರೆ । ಹಲವು ಬಡಾವಣೆಗಳಲ್ಲಿ ಶ್ವಾನ ಕಾಟ । ಕ್ರಮಕ್ಕೆ ಪುರಸಭೆಗೆ ಆಗ್ರಹ
ಎಚ್.ವಿ.ರವಿಕುಮಾರ್ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ೨೩ ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು, ವಯೋವೃದ್ಧರು, ವಾಯು ವಿಹಾರಕ್ಕೆ ತೆರಳುವ ನಾಗರಿಕರು, ಸಾರ್ವಜನಿಕರು ತಿರುಗಾಡಲು ಹಾಗೂ ದ್ವಿಚಕ್ರ ವಾಹನಗಳ ಸವಾರರು ಜೀವಭಯದಲ್ಲಿ ಸಂಚರಿಸಬೇಕಾದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ.ಚಿಟ್ಟನಹಳ್ಳಿ ಬಡಾವಣೆ, ಅರಕಲಗೂಡು ರಸ್ತೆಯ ಹೆದ್ದಾರಿ, ಹೇಮಾವತಿ ಬಡಾವಣೆ, ಪೇಟೆ ಮುಖ್ಯ ರಸ್ತೆ, ಶಿಯಾ ಹಾಗೂ ಸುನ್ನಿ ಮೊಹಲ್ಲಾ, ಗಾಂಧಿನಗರ, ದಾಸಗೌಡರ ಬೀದಿ, ಡಾ.ಅಂಬೇಡ್ಕರ್ ನಗರ, ಆಶ್ರಯ ಬಡಾವಣೆ, ದೇವಾಂಗ ಬಡಾವಣೆಯ ರಸ್ತೆಗಳು, ಆರ್‍ಯ ಈಡಿಗರ ಬೀದಿ, ಕುರುಹಿನಶೆಟ್ಟರ ಬಡಾವಣೆಯ ರಸ್ತೆಗಳು, ಕೋಟೆ ರಥ ಬೀದಿ, ನರಸಿಂಹನಾಯಕನಗರ ಹಾಗೂ ಇತರೆ ಬಡಾವಣೆಗಳಲ್ಲಿ ಶ್ವಾನಗಳ ಹಾವಳಿ ಮಿತಿ ಮೀರಿದ್ದು, ಶಾಲಾ ಮಕ್ಕಳು ರಸ್ತೆಯಲ್ಲಿ ಭಯದಲ್ಲೇ ಓಡಾಡಬೇಕಿದೆ.
ಪ್ರತಿದಿನ ಬೆಳಿಗ್ಗೆ ಬೀದಿ ನಾಯಿಗಳ ಹಿಂಡು ಅಹಾರ ಹುಡುಕುತ್ತ ತಿರುಗುತ್ತವೆ. ಹಿಂಡು ಹಿಂಡಾಗಿ ಸಂಚರಿಸುವ ಕಾರಣ ಒಬ್ಬ ವ್ಯಕ್ತಿ ಇವುಗಳನ್ನು ಬೆದರಿಸಿ, ಓಡಿಸುವುದು ಅಸಾಧ್ಯದ ಮಾತು. ಜತೆಗೆ ಶಾಲೆಗಳಿಗೆ ತೆರಳುವ ಮಕ್ಕಳು ಕೈಯಲ್ಲಿ ಜೀವ ಹಿಡಿದು ಸಂಕಷ್ಟದ ಸ್ಥಿತಿಯಲ್ಲಿ ಓಡಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ರಾತ್ರಿ ವೇಳೆ ಓಡಾಡುವವರು ನಾಯಿ ಹಿಂಡು ಇರುವ ರಸ್ತೆ ಬಿಟ್ಟು ಬದಲಿ ರಸ್ತೆಯಲ್ಲಿ ಓಡಾಡಬೇಕಾದ ಸ್ಥಿತಿ ಹಾಗೂ ಪರಸ್ಥಳದಿಂದ ಬರುವ ಪ್ರಯಾಣಿಕರು ಕೇವಲ ನೂರು ಮೀಟರ್ ರಸ್ತೆ ದಾಟಲು ಬಾಡಿಗೆ ವಾಹನ ಆಶ್ರಯಿಸಲೇಬೇಕು.ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ನಾಯಿಗಳು ಹಿಂದಿನಿಂದ ಅಟ್ಟಿಸಿಕೊಂಡು ಬರುವುದರಿಂದ ಭಯಭೀತರಾಗಿ ಆಯತಪ್ಪಿ ಕೆಳಗೆ ಬಿದ್ದ ಮತ್ತು ಎರಡ್ಮೂರು ನಾಯಿಗಳು ಕಚ್ಚಾಡಿಕೊಂಡು ಏಕಾಏಕಿ ರಸ್ತೆಗೆ ಅಡ್ಡಬಂದು ವಾಹನ ಸವಾರರು ಆಯತಪ್ಪಿ ಕೆಳಗೆ ಬಿದ್ದ ಕಾರಣಗಳಿಂದ ಕೈಕಾಲು ಮೂಳೆ ಮುರಿದುಕೊಂಡು ಗಾಯಗೊಂಡಿರುವ ಹಲವಾರು ಘಟನೆಗಳು ನಡೆದಿದೆ. ಶಾಲೆಗಳಿಗೆ ಮಕ್ಕಳನ್ನು ಪೋಷಕರು ಕೆರೆದುಕೊಂಡು ಹೋಗಿ ಬಿಡಬೇಕಿದೆ, ಒಟ್ಟಿನಲ್ಲಿ ನೆಮ್ಮದಿಯಿಂದ ರಸ್ತೆಗಳಲ್ಲಿ ಓಡಾಡುವಂತ ವಾತಾವರಣ ಮರಿಚಿಕೆಯಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್ ಒಂದಕ್ಕೆ ಸೇರಿದ ಸೂರನಹಳ್ಳಿಯಲ್ಲಿ ಬಾಲರಾಜ್ ಎಂಬ ಯುವಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿತ್ತು ಹಾಗೂ ಆಶ್ರಯ ಬಡಾವಣೆಯಲ್ಲಿ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಲಕನ ರಕ್ಷಣೆ ಮಾಡಿದ್ದರು.ಜತೆಗೆ ಬೀದಿ ನಾಯಿಗಳು ದಾಳಿ ನಡೆಸಲು ಪ್ರಾರಂಭಿಸಿದ್ದು, ಇದು ನಾಗರಿಕರನ್ನು ಜೀವ ಭಯದಲ್ಲಿ ಸಿಲುಕಿಸಿದೆ. ಬೀದಿ ನಾಯಿಗಳ ಹಾವಳಿ ಹಾಗೂ ಸಮಸ್ಯೆಯಿಂದ ನಾಗರೀಕರು ಸಂಕಷ್ಟಕ್ಕೆ ಸಿಲುಕಿದ್ದರೂ ಪುರಸಭೆ ಆಡಳಿತ ಕಂಡೂ ಕಾಣದಂತೆ ಇರುವುದು ನಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಹೆಚ್ಚಿನ ಅನಾಹುತ ಅಥವಾ ಜೀವಹಾನಿಯಾಗುವ ಮುನ್ನ ಬೀದಿ ನಾಯಿಗಳನ್ನು ಹಿಡಿದು ಹೊರಗೆ ಸಾಗಿಸುವ ಮೂಲಕ ಸಮಸ್ಯೆ ನಿವಾರಣೆಗೆ ಮುಂದಾಗಬೇಕೆಂದು ನಾಗರಿಕರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ನಾಯಿಗಳ ಹಾವಳಿಯಿಂದ ಶಾಲೆಗಳಿಗೆ ಮಕ್ಕಳು ಹಾಗೂ ಅಂಗಡಿಗಳಿಂದ ಪದಾರ್ಥಗಳನ್ನು ತರಲು ಹೆದರಿಕೆಯಿಂದ ಹೋಗಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡು, ನಾಯಿಗಳ ಹಾವಳಿಯಿಂದ ಪಾರು ಮಾಡಬೇಕು.ಸ್ವರೂಪ್, ನಾಗರಿಕ.
ಪಟ್ಟಣದಲ್ಲಿ ಪ್ರತಿದಿನ ನಾಯಿಗಳದೇ ಕಾಟ. ಪತ್ರಿಕಾ ವಿತರಕರಿಗೆ ಪ್ರತಿ ನಿತ್ಯ ಪ್ರತಿಯೊಂದು ರಸ್ತೆಗಳಲ್ಲೂ ನಾಯಿಗಳ ಸಮಸ್ಯೆ ಕಾಡುತ್ತಿದೆ. ಜನಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು.ಮಂಜುನಾಥ್, ನಾಗರಿಕ.
ಸರ್ಕಾರದ ಸೂಚನೆಯಂತೆ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆಂದು ಹತ್ತು ಲಕ್ಷ ರು. ಕಾಯ್ದಿರಿಸಲಾಗಿದೆ. ಮೂರು ಸಲ ಟೆಂಡರ್ ಕೆರೆದಿದ್ದರೂ ಒಬ್ಬರೂ ಭಾಗವಹಿಸಿಲ್ಲ, ಪುನಃ ಟೆಂಡರ್ ಕರೆಯಲಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ, ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ.ಸಿ.ಡಿ.ನಾಗೇಂದ್ರ ಕುಮಾರ್, ಪುರಸಭೆ ಮುಖ್ಯಾಧಿಕಾರಿ.