ಸಾರಾಂಶ
ಭಟ್ಕಳ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆ ಆಗುತ್ತಿದ್ದು, ಹೊಳೆ, ಹಳ್ಳಗಳು ಬತ್ತಲಾರಂಭಿಸಿದೆ.
ಅಂತರ್ಜಲ ಮಟ್ಟ ತೀವ್ರ ಇಳಿಕೆ ಕಂಡಿದ್ದರಿಂದ ಹೊಳೆ, ಕೊಳ್ಳಗಳು ಬತ್ತಲು ಕಾರಣವಾಗಿದ್ದು, ಪರಿಣಾಮ ತೋಟಗಳು ನೀರಿಲ್ಲದೇ ಒಣಗುವಂತಾಗಿದೆ.ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಸಲ ಬಿಸಿಲ ತಾಪಮಾನ ಹೆಚ್ಚಾಗಿದ್ದು, ಎಲ್ಲೆಡೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಕಳೆದ ವಾರ ಒಂದು ತಾಸು ಸತತ ಮಳೆ ಸುರಿದಿದ್ದರೂ ಬಿಸಿಲ ಝಳ ಹೆಚ್ಚಿದ್ದರಿಂದ ನೀರು ಒಣಗುವಂತಾಗಿದೆ.
ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಬಾವಿಗಳಲ್ಲಿಯೂ ನೀರು ಕಡಿಮೆಯಾಗಿದೆ. ಕೆಲವು ಕಡೆ ದಿನಬಳಕೆಗೇ ನೀರಿಲ್ಲವಾಗಿದ್ದು, ದೂರದಿಂದ ನೀರು ತರುವ ಸ್ಥಿತಿ ಉಂಟಾಗಿದೆ. ಗ್ರಾಮಾಂತರ ಭಾಗದಲ್ಲಿ ನೀರಿಲ್ಲದೇ ತೋಟಗಳು ಒಣಗಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಕಳೆದ ವಾರದ ಮಳೆ ಬಂದಿದ್ದರಿಂದ ನಾಲ್ಕೈದು ದಿನ ತೋಟಕ್ಕೆ ಅನುಕೂಲವಾಗಿತ್ತು. ಆದರೆ ಕೆಲವು ಕಡೆ ಹೊಳೆ, ಬಾವಿಗಳಲ್ಲಿ ನೀರು ಕಡಿಮೆ ಆಗಿರುವುದರಿಂದ ತೋಟಕ್ಕೆ ನೀರು ಹಾಯಿಸಲು ಕಷ್ಟವಾಗಿದೆ.ಬಾವಿಗಳಲ್ಲಿ ಕುಡಿಯುವುದಕ್ಕೇ ನೀರು ಕಡಿಮೆಯಾಗಿದೆ. ಇನ್ನು ತೋಟಕ್ಕೆ ಎಲ್ಲಿಂದ ನೀರು ಹಾಯಿಸುವುದು ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಇನ್ನು ತಾಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದ್ದರಿಂದ ತಾಲೂಕು ಆಡಳಿತದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬಿಸಿಲ ಝಳದಿಂದ ಜನರು ಮನೆಯಿಂದ ಹೊರಗೆ ಬರದಂತಾಗಿದೆ. ಪಟ್ಟಣದಲ್ಲಂತೂ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ವ್ಯಾಪಕ ಉರಿಬಿಸಿಲು ಇರುತ್ತಿದ್ದು, ಈ ಸಂದರ್ಭದಲ್ಲಿ ತಿರುಗಾಡುವುದೇ ಕಷ್ಟ ಎನಿಸಿದೆ. ಆಗಾಗ ಮಳೆ ಬರದೇ ಇದ್ದಲ್ಲಿ ನೀರಿನ ಮಟ್ಟ ಮತ್ತಷ್ಟು ಕೆಳಗೆ ಹೋಗುವ ಸಾಧ್ಯತೆ ಇದೆ. ತಾಲೂಕಿನ ಜನರು ಮತ್ತೆ ಭಾರೀ ಮಳೆಯ ನಿರೀಕ್ಷೆಯಲ್ಲಿದ್ದಾರೆ.