ಸಾರಾಂಶ
ಹೂವಿನಹಡಗಲಿ: ನಮ್ ಓಣ್ಯಾಗ ಚೊಲೋ ಇದ್ದ ಲೈಟ್ ಕಿತ್ತು ಎಲ್‌ಇಡಿ ಲೈಟ್ ಹಾಕ್ಯಾರ. ಅದು ಎಲ್ಲ ಕಡಿಗೂ ಹಾಕಿಲ್ಲ. ಒಂದ್ ಕಂಬಾ ಬಿಟ್ಟು ಇನ್ನೊಂದು ಕಂಬಕ್ಕ ಹಾಕ್ಯಾರ. ಇದರಿಂದ ಓಣಿಗೆ ಬೆಳಕು ಆಗುತ್ತಿಲ್ಲ, ನಮಗ ಓಣ್ಯಾಗಿನ ಮಂದಿ ಬಾಯಿಗೆ ಬಂದಂಗ ಅಂತಾರ. ಮೊದಲು ಸಮಸ್ಯೆ ಬಗೆಹರಿಸಿ....
ಹೀಗೆಂದು ಪುರಸಭೆ ಸದಸ್ಯರು ಒಬ್ಬರ ಮೇಲೊಬ್ಬರು ಸ್ಪರ್ಧೆಗೆ ಬಿದ್ದವರ ಹಾಗೆ ಸಭೆಯಲ್ಲಿ ಆರೋಪಿಸಿದರು.ಹೌದು, ಇಲ್ಲಿನ ಪುರಸಭೆಯ ಎಂ.ಪಿ. ಪ್ರಕಾಶ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್ ಬೀ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬೀದಿ ದೀಪಗಳ ಬಗ್ಗೆ ಹಿಗ್ಗಾ ಮುಗ್ಗಾ ಮಾತನಾಡಿದ್ದು ಕಂಡು ಬಂತು.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಲೋಕೋಪಯೋಗಿ ಇಲಾಖೆಯವರಿಗೆ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಪಟ್ಟಣದಲ್ಲಿ 1136 ಎಲ್‌ಇಡಿ ಲೈಟ್ ಅಳವಡಿಸುವ ಕಾಮಗಾರಿ ನಡೆದಿದೆ. ಇನ್ನು ಕೆಲವೆಡೆ ಲೈಟ್ ಅಳವಡಿಸುವ ಕಾರ್ಯ ಬಾಕಿ ಇದೆ. ಎಲ್ಲ ಕಡೆಗೂ ಹಾಕುತ್ತಾರೆಂದು ಸಭೆಗೆ ಮಾಹಿತಿ ನೀಡಿದರು.ಇದಕ್ಕೆ ಸುಮ್ಮನಾಗದ ಸದಸ್ಯ ಜ್ಯೋತಿ ಮಲ್ಲಣ್ಣ, ಎಸ್.ಶಫಿ ಇತರರು, ವಾರ್ಡ್‌ಗೆ 40 ರಂತೆ ಎಲ್‌ಇಡಿ ಲೈಟ್ ಹಾಕಿದ್ದಾರೆಂಬ ಮಾಹಿತಿ ಇದೆ ಎಷ್ಟು, ಆದರೆ ವಾರ್ಡ್‌ಗಳಲ್ಲಿ ಎಷ್ಟೊಂದು ಲೈಟ್‌ಗಳನ್ನು ಹಾಕಿಲ್ಲ. ಲೋಕೋಪಯೋಗಿ ಇಲಾಖೆಯವರನ್ನು ಕೇಳಿದರೆ ಕಾರ್ಮಿಕರನ್ನು ಕಳಿಸಿ ಲೈಟ್ ಹಾಕುತ್ತೇವೆ ಎನ್ನುತ್ತಾರೆ. ದಿನವೀಡಿ ಕಾಯ್ದುರೂ ಅವರು ಸ್ಥಳಕ್ಕೆ ಬರುತ್ತಿಲ್ಲ. ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಸರಿಯಾಗಿ ಉತ್ತರಿಸುತ್ತಿಲ್ಲ. ನಾವು ಯಾರನ್ನು ಕೇಳಬೇಕು? ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಮುಖ್ಯಾಧಿಕಾರಿ ಇಮಾಮಸಾಹೇಬ್ ಮಾತನಾಡಿ, ಈ ಕುರಿತು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ನ್ನು ಕಚೇರಿಗೆ ಕರೆಸುತ್ತೇವೆ. ಅರೆಬರೆಯಾಗಿರುವ ಕಡೆಗಳಲ್ಲಿ ಶೀಘ್ರದಲ್ಲೇ ಲೈಟ್ ಹಾಕುವಂತೆ ಸೂಚಿಸುತ್ತೇವೆಂದು ಸಭೆಗೆ ತಿಳಿಸಿದಾಗ ಸದಸ್ಯರು ಸುಮ್ಮನಾದರು.ರಾಜೀವ್ ಹಾಗೂ ನಜೀರ್ ನಗರದಲ್ಲಿ ಸಿಸಿ ರಸ್ತೆ ಸಂಪೂರ್ಣ ಆಗಿಲ್ಲ. ವಾರ್ಡ್‌ನ ಜನ ನಿತ್ಯ ಕೆಸರಿನಲ್ಲಿ ಓಡಾಡುತ್ತಿದ್ದಾರೆ, ಸಿಸಿ ರಸ್ತೆ ಮಾಡಿಸಿ ಎಂದು ಹೇಳುತ್ತಿದ್ದಾರೆ, ಪುರಸಭೆಯಿಂದ ನಮಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ, ನಾವು ಜನರಿಗೆ ಏನು ಉತ್ತರ ನೀಡಬೇಕೆಂದು ಸದಸ್ಯೆ ನಿರ್ಮಲ ಸಭೆಯಲ್ಲಿ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಇಮಾಮ್ ಸಾಹೇಬ್, ಪುರಸಭೆಯ 15ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಅನುದಾನ ಬಂದಾಗ ನೀವು ಬೇರೆಡೆ ಕಾಮಗಾರಿ ಹಾಕುತ್ತೀರಿ. ಒಂದೇ ಕಡೆಗೆ ಅನುದಾನ ಹಾಕಿದರೆ ಕಾಮಗಾರಿ ಪೂರ್ಣವಾಗುತ್ತವೆ. ಇದರಿಂದ ಸಮಸ್ಯೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು.ನಮ್ಮ ವಾರ್ಡ್‌ಗೆ ಕಳೆದ 5 ವರ್ಷಗಳಿಂದ ₹5 ಅನುದಾನ ಕೊಟ್ಟಿಲ್ಲ. ಈ ಹಿಂದೆ ಅಧ್ಯಕ್ಷರಾಗುವ ಎಲ್ಲರೂ ತಮ್ಮ ವಾರ್ಡ್‌ಗಳಿಗೆ ₹20 ಲಕ್ಷವರೆಗೂ ಅನುದಾನ ಹಾಕಿದ್ದಾರೆ. ಹೀಗಾದರೆ ಜನರ ಬೇಡಿಕೆಯನ್ನು ಹೇಗೆ ಈಡೇರಿಸಬೇಕೆಂದು ಸದಸ್ಯರಾದ ಎಸ್.ತಿಮ್ಮಣ್ಣ, ಯು.ಹನುಮಂತಪ್ಪ, ಎಸ್.ಶಫಿ ಇತರರು ಸಭೆಯಲ್ಲಿ ದೂರಿದರು.
ನೀವೇ ಕ್ರಿಯಾ ಯೋಜನೆಯನ್ನು ತಯಾರಿಸಿದ್ದೀರಿ. ನಿಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆ ಬಗೆಹರಿಸಲು ನಾನಾ ಕಾಮಗಾರಿಗಳ ಪಟ್ಟಿಯನ್ನು ನೀಡಿದ್ದೀರಿ. ಆ ಪ್ರಕಾರವಾಗಿ ಕಾಮಗಾರಿಗಳು ನಡೆದಿವೆ ಎಂದು ಮುಖ್ಯಾಧಿಕಾರಿ ಉತ್ತರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್ ಬೀ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೈನ್, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಮುಖ್ಯಾಧಿಕಾರಿ ಇಮಾಮಸಾಹೇಬ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))