ರಾಮನಗರ: ಬೀದಿ ಬದಿ ವ್ಯಾಪಾರಿಗಳು ನಗರ ಪ್ರದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಅವರ ಅನುಕೂಲಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕಾಭಿವೃದ್ಧಿ ಸಾಧಿಸುವಂತೆ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕಿವಿಮಾತು ಹೇಳಿದರು
ರಾಮನಗರ: ಬೀದಿ ಬದಿ ವ್ಯಾಪಾರಿಗಳು ನಗರ ಪ್ರದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಅವರ ಅನುಕೂಲಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕಾಭಿವೃದ್ಧಿ ಸಾಧಿಸುವಂತೆ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕಿವಿಮಾತು ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ವತಿಯಿಂದ ನಗರ ಬೀದಿಬದಿ ವ್ಯಾಪಾರಸ್ಥರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ವ್ಯಾಪಾರಕ್ಕೆ ಪಿಎಂ ಸ್ವನಿಧಿ ನಂತಹ ಯೋಜನೆಗಳ ಆರ್ಥಿಕ ನೆರವು ಸಿಗಲಿದೆ. ಸಾಲ ಮರುಪಾವತಿಯನ್ನು ಸರಿಯಾಗಿ ಮಾಡಿದರೆ ಬಡ್ಡಿ ಸಬ್ಸಿಡಿ ಮತ್ತು ಹೆಚ್ಚಿನ ಸಾಲದ ಮಿತಿ ಲಭ್ಯವಾಗುತ್ತದೆ ಎಂದರು.ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೆ ಬೀದಿ ಬದಿ ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕಾಗಿ ಪ್ರತಿ ದಿನ ಹೋರಾಡುತ್ತಿದ್ದಾರೆ. ಅವರ ವ್ಯಾಪಾರ ಲಾಭದಾಯಕವಾಗಿ ಆರ್ಥಿಕಾಭಿವೃದ್ಧಿ ಸುಧಾರಿಸಲೆಂದೇ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ವ್ಯಾಪಾರಿಗಳು ತಮ್ಮ ಹಕ್ಕುಗಳ ಜೊತೆಗೆ ಬ್ಯಾಂಕಿನ ವ್ಯವಹಾರ, ಡಿಜಿಟಲ್ ವಹಿವಾಟಿನ ಬಗ್ಗೆಯೂ ತಿಳಿವಳಿಕೆ ಹೊಂದಬೇಕು ಎಂದು ಹೇಳಿದರು.
ವ್ಯಾಪಾರಿಗಳು ಸೂಕ್ತ ದಾಖಲೆಗಳು, ಸಾಲ ಮರುಪಾವತಿ, ಆರ್ಥಿಕ ಶ್ರಮತೆ ಸರಿಯಾಗಿದ್ದರೆ ಬ್ಯಾಂಕಿನವರೇ ಹುಡುಕಿಕೊಂಡು ಬಂದು ಸಾಲ ಕೊಡುತ್ತಾರೆ. ಈಗ ಎಲ್ಲರು ಕ್ಯಾಶ್ ಲೆಸ್ ನತ್ತ ಮುಖ ಮಾಡುತ್ತಿರುವ ಕಾರಣ ವ್ಯಾಪಾರಿಗಳು ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಅರಿವು ಹೊಂದಬೇಕು. ಇದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ರಸ್ತೆ ಬದಿ ವ್ಯಾಪಾರಿಗಳು ಸಮಾಜದ ನಿಜವಾದ ಆಸ್ತಿ. ನಾವು ನಿಮ್ಮಗಳ ಪರವಾಗಿದ್ದೇವೆ. ನಗರಸಭೆಯಿಂದ ನಿಮಗೆಂದೂ ತೊಂದರೆ ಕೊಟ್ಟಿಲ್ಲ. ಆದರೆ, ನೀವುಗಳು ರಸ್ತೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದೀರಿ. ತೆರವು ಮಾಡುವಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡಬೇಡಿ. ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು. ನಮ್ಮವರೆ ಆಗಿರುವ ಎಲ್ಲರ ಹಿತ ಕಾಪಾಡುವುದು ನಗರಸಭೆ ಕರ್ತವ್ಯವಾಗಿದೆ ಎಂದು ಕೆ.ಶೇಷಾದ್ರಿ ಹೇಳಿದರು.
ಅಗತ್ಯ ದಾಖಲೆಗಳಿದ್ದರೆ ಸಾಲಸೌಲಭ್ಯ:ನಗರಸಭೆ ಆಯುಕ್ತ ಜಯಣ್ಣ ಮಾತನಾಡಿ, ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ಯೋಜನೆ (ಪಿಎಂ ಸ್ವನಿಧಿ) ಅಡಿಯಲ್ಲಿ ಯಾವುದೇ ಭದ್ರತೆ ಇಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಮೂರು ಹಂತಗಳಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಈಗ 1 ರಿಂದ 2 ಲಕ್ಷ ರುಪಾಯಿವರೆಗೂ ಸಾಲಸೌಲಭ್ಯ ಪಡೆಯಲು ಅವಕಾಶ ಇದೆ ಎಂದರು.
ನಗರಸಭೆಯು ಬೀದಿ ಬದಿ ವ್ಯಾಪಾರಿಗಳು ಮತ್ತು ಬ್ಯಾಂಕಿನ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ನಗರಸಭೆ ಗ್ಯಾರೆಂಟಿ ಮೇಲೆಯೇ ಬ್ಯಾಂಕಿನವರು ಸಾಲಸೌಲಭ್ಯ ಕಲ್ಪಿಸುತ್ತಾರೆ. ಇಲ್ಲಿವರೆಗೆ ಶೇಕಡ 85ರಷ್ಟು ಅರ್ಜಿಗಳು ಮಂಜೂರಾಗಿ ಸಾಲ ವಿತರಣೆಯಾಗಿದೆ. ಮರು ಪಾವತಿ ಸರಿಯಾಗಿದ್ದು, ಅಗತ್ಯ ದಾಖಲೆಗಳನ್ನು ಒದಗಿಸಿದರೆ ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.ಅಭಿಯಾನ ವ್ಯವಸ್ಥಾಪಕ ಸಿ.ರಾಮಕೃಷ್ಣರವರು ಪಿಎಂ ಸ್ವಾನಿಧಿ ಮತ್ತು ಸ್ವಯಂ ಉದ್ಯೋಗ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ರವರು ಬ್ಯಾಂಕಿನ ವ್ಯವಹಾರ ಮತ್ತು ಮರುಪಾವತಿ, ಸಮುದಾಯ ಸಂಪನ್ಮೂಲ ವ್ಯಕ್ತಿಯಾದ ವಿಜಯಮ್ಮರವರ ಜ್ಞಾನ ಹಾಗೂ ಅಭಿವೃದ್ಧಿ, ಮಹೇಶ್ವರಿರವರು ಡಿಜಿಟಲ್ ವಹಿವಾಟು ಹಾಗೂ ಅಭಿಯಾನ ವ್ಯವಸ್ಥಾಪಕ ನಟರಾಜೇಗೌಡರವರು ಬೀದಿ ಬದಿ ವ್ಯಾಪಾರಿಗಳ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಕಾರ್ಡ್ ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಜಿಲ್ಲಾ ಕೌಶಲ್ಯಾಧಿಕಾರಿ ಪುಷ್ಪಾಲತಾ, ಪಟ್ಟಣ ಮಾರಾಟ ಸಮಿತಿಯ ಮಾರಣ್ಣ, ಸರಸ್ವತಿ, ಚಿಕ್ಕತಾಯಮ್ಮ ಉಪಸ್ಥಿತರಿದ್ದರು.7ಕೆಆರ್ ಎಂಎನ್ 4.ಜೆಪಿಜಿ
ರಾಮನಗರ ನಗರಸಭೆ ಆಯೋಜಿಸಿದ್ದ ಬೀದಿಬದಿ ವ್ಯಾಪಾರಸ್ಥರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಿದರು. ಉಪಾಧ್ಯಕ್ಷೆ ಗಿರಿಜಮ್ಮ, ಜಿಲ್ಲಾ ಕೌಶಲ್ಯಾಧಿಕಾರಿ ಪುಷ್ಪಾಲತಾ, ಪಟ್ಟಣ ಮಾರಾಟ ಸಮಿತಿಯ ಮಾರಣ್ಣ, ಸರಸ್ವತಿ, ಚಿಕ್ಕತಾಯಮ್ಮ ಉಪಸ್ಥಿತರಿದ್ದರು.