ಬೀದಿ ಬದಿ ವ್ಯಾಪಾರಸ್ಥರಿಗೆ ಕಾನೂನಿನ ಅರಿವು ಅಗತ್ಯ

| Published : May 17 2025, 01:46 AM IST

ಸಾರಾಂಶ

ಬೀದಿ ಬದಿ ವ್ಯಾಪಾರಸ್ಥರಿಗೆ ಕಾನೂನಿನ ಅರಿವು ಅಗತ್ಯವಿದೆ ಎಂದು ಸಮುದಾಯ ಸಂಘಟನಾಧಿಕಾರಿ ಪ್ರಹ್ಲಾದ ಹೇಳಿದರು.

ಗದಗ: ಬೀದಿ ಬದಿ ವ್ಯಾಪಾರಸ್ಥರಿಗೆ ಕಾನೂನಿನ ಅರಿವು ಅಗತ್ಯವಿದೆ ಎಂದು ಸಮುದಾಯ ಸಂಘಟನಾಧಿಕಾರಿ ಪ್ರಹ್ಲಾದ ಹೇಳಿದರು.

ನಗರದ ಗ್ರೇನ್ ಮಾರುಕಟ್ಟೆಯಲ್ಲಿ ಗುರುವಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಬೆಂಗಳೂರು, ಗದಗ-ಬೆಟಗೇರಿ ನಗರಸಭೆ, ಪ್ರಧಾನ ಮಂತ್ರಿ ಬೀದಿ-ಬದಿ ವ್ಯಾಪಾರಿಗಳ ಆತ್ಮನಿರ್ಭರ, ಪಿ.ಎಂ. ಸ್ವನಿಧಿ, ಸಮೃದ್ಧ ಯೋಜನೆ ಉತ್ಸವ ಕಾರ್ಯಕ್ರಮ ಅಂಗವಾಗಿ ಬೀದಿ-ಬದಿ ವ್ಯಾಪಾರಸ್ಥರಿಗೆ ಉತ್ತೇಜನ ನೀಡಲು ನಡೆದ ಕಾನೂನು ಅರಿವು ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕಾಗಿ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆಯಬೇಕು. 2025-26ರಿಂದ ಹೊಸ ಯೋಜನೆ ಬರುತ್ತಿವೆ. ಹೊಸ ಯೋಜನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ತಿಳಿಸಿದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಬಸವರಾಜ ಮಲ್ಲೂರ ಮಾತನಾಡಿ, ಕಾನೂನು ಪಾಲಿಸಲು ಸಾಕಷ್ಟು ಅಡೆ-ತಡೆ ಇದ್ದರೂ ಪ್ರಾಮಾಣಿಕವಾಗಿ ಅದನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬೀದಿ-ಬದಿ ವ್ಯಾಪಾರಸ್ಥರಿಗೆ ತೊಂದರೆಯಾದರೆ ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಎನ್ನುವ ಅರಿವು ನಿಮ್ಮಲ್ಲಿ ಇರಬೇಕು. 2014ರ ಮೊದಲು ನೀವು ಭರಿಸುವ ಹಣ ಸರ್ಕಾರಕ್ಕೆ ಹೋಗುತ್ತಿತ್ತು. ಆದರೆ, ಆ ಹಣ ಈಗ ನೇರವಾಗಿ ನಿಮ್ಮ ಸದುಪಯೋಗಕ್ಕೆ ಹೋಗುತ್ತದೆ. ವ್ಯಾಪಾರಸ್ಥರು ಮೊದಲು ಸಂಘಟಿತರಾಗಬೇಕು ಎಂದರು.

ಪ್ರತಿ ವರ್ಷ ವ್ಯಾಪಾರಸ್ಥರ ಸರ್ವೆ ಮಾಡಲಾಗುತ್ತದೆ. ಇದರಿಂದ ಕಾನೂನು ಅರಿವು ಪಡೆಯುವುದು ಅಗತ್ಯವಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲ ಮಾಹಿತಿ ಪಡೆಯಬೇಕು. ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಆಗಬೇಕು. ಅಂದಾಗ ಜೀವನಮಟ್ಟ ಸುಧಾರಿಸಲು ಸಾಧ್ಯವಾಗುತ್ತದೆ. ಹೋಮ್ ಡಿಲೆವರಿ ಮೂಲಕವೂ ವ್ಯಾಪಾರ ಅಭಿವೃದ್ಧಿ ಹೊಂದಬೇಕು. ಇದರಿಂದ ಉತ್ತಮ ಆದಾಯ ಪಡೆಯಬಹುದು ಎಂದು ಸಲಹೆ ನೀಡಿದರು.

ಗುರುರಾಜ ಬಿ. ಗೌರಿ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರ ಜಿಲ್ಲೆ ಹಾಗೂ ತಾಲೂಕು ಕೇಂದ್ರದಲ್ಲಿ ಇರುತ್ತದೆ. 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಉಚಿತ ಕಾನೂನು ಸೇವೆ ನೀಡುತ್ತೇವೆ. ಕಾನೂನು ಸಮಸ್ಯೆ ಇದ್ದರೂ ವ್ಯಾಪಾರಸ್ಥರ ಪರವಾಗಿ ನಾವು ಉಚಿತವಾಗಿ ಕಾನೂನು ಹೋರಾಟ ಮಾಡುತ್ತೇವೆ. ಕಾರ್ಮಿಕರಿಗಾಗಿ ಎಲ್‌ಐಸಿ ರೀತಿ ಒಂದು ಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ 5 ವರ್ಷಗಳಿಗೊಮ್ಮೆ ವೆಂಡಿಗ್ ಜೋನ್‌ನಲ್ಲಿನ ಸಾಧಕ-ಬಾದಕಗಳ ಬಗ್ಗೆ ಸರ್ವೆ ಮಾಡಲಾಗುತ್ತದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವ್ಯಾಪಾರಸ್ಥರ ಹಿತ ಕಾಪಾಡಬೇಕು ಎಂದರು.

ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಬಾಷಾಸಾಬ್‌ ಮಲ್ಲಸಮುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.