ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರೈಲ್ವೆ ಪೊಲೀಸರು ನಮ್ಮ ಮೇಲೆ ಕಳ್ಳತನದ ಆರೋಪ ಹೊರಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗುಜರಿ ವ್ಯಾಪಾರಸ್ಥರು ಸೋಮವಾರ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೇ ವೇಳೆ ಆಲೂರು ತಾಲೂಕಿನ ಶಿಕಾರಿಪುರದ ನವಾಜ್, ಇತರರು ಮಾಧ್ಯಮದೊಂದಿಗೆ ಮಾತನಾಡಿ, ನಾನು ಮತ್ತು ನಮ್ಮ ಗ್ರಾಮದ ಕಾಳ ಮತ್ತು ಇತರರು ನಮ್ಮ ವೃತ್ತಿಯಿಂದ ಗುಜರಿ ವ್ಯಾಪಾರವನ್ನು ಸುಮಾರು ೧೦ ವರ್ಷದಿಂದ ಮಾಡುತ್ತಿದ್ದು, ಇದೇ ವೃತ್ತಿಯಿಂದ ನಮ್ಮ ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತೇವೆ. ನಮ್ಮ ಗ್ರಾಮದಲ್ಲಿ ವಾಸ ಮಾಡುತ್ತಿರುವ ನಮಗೆ ಬೆಂಗಳೂರಿನ ಯಶವಂತಪುರ ಹಾಗೂ ಹಾಸನದ ರೈಲ್ವೆ ಪೊಲೀಸರು ರೈಲ್ವೆ ಇಲಾಖೆಗೆ ಸೇರಿದ ಉಪಕರಣಗಳನ್ನು ಖರೀದಿ ಮಾಡಿರುತ್ತೀರಾ ಎಂದು ನಮಗೆ ಪದೇ ಪದೆ ಕಿರುಕುಳ ನೀಡಿ ನಮ್ಮಿಂದ ಹಣ ಪಡೆಯುತ್ತಿರುತ್ತಾರೆ. ಇದೇ ರೀತಿ ಇಲ್ಲಿನ ಪೊಲೀಸರು ಕೂಡ ಹಣ ವಸೂಲಿ ಮಾಡುತ್ತಿದ್ದು, ನಾವು ದುಡಿದಂತಹ ಹಣವನ್ನೆಲ್ಲಾ ಈ ಮೇಲ್ಕಂಡ ಪೊಲೀಸರಿಗೆ ಕೊಡುತ್ತಿದ್ದು, ಬಡ್ಡಿ ಸಾಲ ಮಾಡಿ ಹಣ ನೀಡಿರುತ್ತೇವೆ ಎಂದು ಆರೋಪಿಸಿದರು.
ಹೀಗಿರುವಲ್ಲಿ ಕಳೆದ ಎರಡು ದಿನಗಳ ಹಿಂದೆ ಇದೇ ರೈಲ್ವೆ ಪೊಲೀಸರಾದ ಖಲೀಲ್, ಜಾವೀದ್, ಎ.ಎಸ್.ಐ ರವಿ ಹಾಗೂ ಇತರರ ನಮ್ಮ ಗ್ರಾಮದ ಹುಡುಗರನ್ನು ಕರೆದುಕೊಂಡು ಹೋಗಿ ರೈಲ್ವೆಇಲಾಖೆಗೆ ಸೇರಿದ ವಸ್ತುಗಳನ್ನು ಖರೀದಿಸಿದ್ದೀರಾ ಎಂದು ಕಿರುಕುಳ ನೀಡುತ್ತಿದ್ದು, ಇವರ ಕಿರುಕುಳದಿಂದ ನಮ್ಮ ಗ್ರಾಮದ ಕಾಳ ರವರು ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡು ಗಾಯಗೊಂಡು ಈಗ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಅಲ್ಲದೆ ಅರ್ಮಾನ್ ಬಿನ್ ಸಮೀರ್ ಪಾಷಾ ಇವರನ್ನು ಸಹ ೪ ದಿನಗಳ ಹಿಂದೆ ಕರೆದುಕೊಂಡುಹೋಗಿ ಅವರಿಗೆ ಕಿರುಕುಳ ನೀಡುತ್ತಿದ್ದು, ಅವರ ಬಗ್ಗೆ ಮಾಹಿತಿ ಕೇಳಿದರೆ ನನಗೆ ಗೊತ್ತಿಲ್ಲ ಎಂದು ತಿಳಿಸುತ್ತಿರುತ್ತಾರೆ. ಪ್ರತಿ ಬಾರಿ ರೈಲ್ವೆ ಪೋಲೀಸರು ನಮ್ಮಗಳ ಮೇಲೆ ದೌರ್ಜನ್ಯ ನಡೆಸುತ್ತಿರುತ್ತಾರೆ. ಕಿರುಕುಳ ನೀಡುತ್ತಿರುವ ಇವರ ವಿರುದ್ಧ ಕ್ರಮ ಕೈಗೊಂಡು ನಮಗೆ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು.ಪ್ರತಿಭಟನೆಯಲ್ಲಿ ತೋಫಿಕ್ ಪಾಷಾ, ರಾಜು, ವಸಂತ, ಆಶಾ, ಗೀತಾ, ಶಾಂತಿ, ಲೀಲಾ, ರತ್ನ, ಆರತಿ, ಮಂಜುಳಾ, ಪ್ರಿಯಾ, ವಿಜಯ, ಧನುಷ್, ಗಣೇಶ್, ಕಾನೇಶ್, ಸುಮಿತ್ರಾ, ಅಭಿಮಾನ್, ಪವನ್, ತಾರಾ ಸೇರಿದಂತೆ ಇತರರು ಇದ್ದರು.