ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿಬೀದಿ ಬದಿ ವ್ಯಾಪಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಪಟ್ಟಣದ ಪುರಸಭೆ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಮುಂದೆ ಸೇರಿದ ಬೀದಿಬದಿ ವ್ಯಾಪಾರಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಐಟಿಯುನ ರಾಜ್ಯ ಘಟಕದ ಕಾರ್ಯದರ್ಶಿ ಜಿ.ರಾಮಕೃಷ್ಣ ಮಾತನಾಡಿ, ಪುರಸಭೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಇಲ್ಲಿಯವರೆಗೂ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ವ್ಯಾಪಾರಸ್ಥರಿಗೆ ಸರಿಯಾದ ಕ್ರಮದಲ್ಲಿ ಗುರುತಿನ ಚೀಟಿ ನೀಡಿಲ್ಲ. ಅಲ್ಲದೇ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುರುತಿನ ಚೀಟಿ ಇಲ್ಲದೆ ಅನಧಿಕೃತವಾಗಿ ವ್ಯಾಪಾರಕ್ಕೆ ಅವಕಾಶ ನೀಡಿದ್ದಾರೆ. ಅನಧಿಕೃತ ವ್ಯಾಪಾರಸ್ಥರು ವ್ಯಾಪಾರ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೀದಿ ಬದಿ ವ್ಯಾಪಾರಸ್ಥರಿಂದ ಅಧಿಕ ಶುಲ್ಕ ವಸೂಲಾತಿ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬೀದಿಬದಿ ವ್ಯಾಪಾರಿಗಳ ಸಂಘದ ಗೌರವ ಅಧ್ಯಕ್ಷ ಎಚ್.ಕೆ.ತಿಮ್ಮೇಗೌಡ ಮಾತನಾಡಿ, ಬೀದಿಬದಿ ವ್ಯಾಪಾರಿಗಳ ವೆಡ್ಡಿಂಗ್ ಕಮಿಟಿ ಸಭೆ ಕರೆಯದೇ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಸಂಘದ ಚುನಾಯಿತ ಪ್ರತಿನಿಧಿಗಳಿಗೆ ಪ್ರತಿನಿಧಿ ಪತ್ರ ನೀಡದಿರುವುದು ಸರಿಯಲ್ಲ, ಅಲ್ಲದೇ ಇಲ್ಲಿಯವರೆಗೆ ಒಂದೇ ಒಂದು ಸಭೆಯನ್ನು ನಡೆಸದೇ ಬೀದಿಬದಿ ವ್ಯಾಪಾರಿಗಳಿಗೆ ಪುರಸಭೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನಾಕಾರರು ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಪಟ್ಟಣದ ಅನಂತ್ ರಾಂ ವೃತ್ತದಿಂದ ಪುರಸಭಾ ಕಚೇರಿಗೆ ಬೀದಿಬದಿ ವ್ಯಾಪಾರಿಗಳು ಮೆರವಣಿಗೆ ನಡೆಸಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಸುಶೀಲಾ, ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ಗೌರಮ್ಮ ಕಾರ್ಯದರ್ಶಿ ಸವಿತಾ, ಖಜಾಂಚಿ ಕೃಷ್ಣ ಭಾಗವಹಿಸಿದ್ದರು.