ಬೀದಿ ಬದಿ ವ್ಯಾಪಾರಿಗಳು ಆರೋಗ್ಯದ ಕಡೆ ಗಮನ ನೀಡಬೇಕು: ಜುಬೇದಾ ಸಲಹೆ

| Published : Oct 30 2025, 01:15 AM IST

ಬೀದಿ ಬದಿ ವ್ಯಾಪಾರಿಗಳು ಆರೋಗ್ಯದ ಕಡೆ ಗಮನ ನೀಡಬೇಕು: ಜುಬೇದಾ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುವ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜುಬೇದಾ ಸಲಹೆ ನೀಡಿದರು.

- ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮಾಹಿತಿ ಕಾರ್ಯಕ್ರಮ

-

-ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ಹೆಚ್ಚಳ

- ಡಿಜಿಟಲ್ ಪಾವತಿ ಮೂಲಕ ವ್ಯವಹಾರ ಮಾಡಲು ಸಲಹೆ

- ಮನೆ ಮದ್ದು ಬಳಕೆಯಿಂದ ಆರೋಗ್ಯ ರಕ್ಷಿಸಿಕೊಳ್ಳ ಬಹುದು

- ಲೋಕ ಕಲ್ಯಾಣ ಮೇಳ ಮತ್ತು ಸಮೃದ್ಧಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುವ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜುಬೇದಾ ಸಲಹೆ ನೀಡಿದರು.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪಟ್ಟಣದ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ಬದಿ ವ್ಯಾಪಾರಸ್ಥರಿಗೆ ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸುತ್ತ ಮುತ್ತ ಸಿಗುವ ವಿವಿಧ ರೀತಿ ಸೊಪ್ಪುಗಳನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳ ಬಹುದು. ಸ್ವಸಹಾಯ ಸಂಘದ ಸದಸ್ಯರು ಸೂಕ್ತ ತರಬೇತಿ ಪಡೆದು ಸೋಪು, ಪಿನಾಯಿನ್ ಗಳನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಆದಾಯಗಳಿಸಬಹುದು ಎಂದರು.

ಪ್ರಾಸ್ತಾವಿಕವಾಗಿ ಪಟ್ಟಣ ಪಂಚಾಯಿತಿ ಸಮುದಾಯ ಸಂಘಟಕ ಲಕ್ಷ್ಮಣಗೌಡ ಮಾತನಾಡಿ, ಆತ್ಮನಿರ್ಭರ ನಿಧಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ಬದಿ ವ್ಯಾಪಾರಸ್ಥರ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಡಿ ಲೋಕ ಕಲ್ಯಾಣ ಮೇಳ ಮತ್ತು ಸಮೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಹಿಂದೆ ಮೊದಲನೇ ಕಂತಿನಲ್ಲಿ ₹10 ಸಾವಿರ ಸಾಲ ನೀಡಲಾಗುತ್ತಿತ್ತು. ಪ್ರಸ್ತುತ ಇದನ್ನು ₹15 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸರಿಯಾಗಿ ಸಾಲ ಮರುಪಾವತಿಸಿದವರಿಗೆ 2 ನೇ ಕಂತು ₹25 ಸಾವಿರ ಸಾಲ ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ಪಾವತಿ ಮೂಲಕ ವ್ಯವಹಾರ ಮಾಡಿದರೆ ಹೆಚ್ಚುವರಿ ಆದಾಯ ಬರಲಿದೆ ಎಂದರು.

ಪಟ್ಟಣದ ಮಾರಾಟ ಸಮಿತಿ ಸದಸ್ಯ ಗುರುಮೂರ್ತಿ ಮಾತನಾಡಿ, ಡಿಜಿಟಲ್ ಪಾವತಿ ಮೂಲಕ ವ್ಯವಹಾರ ಮಾಡಿದ್ದರಿಂದ ಹೆಚ್ಚುಲಾಭ ಬರುತ್ತಿದೆ. ಎಲ್ಲರೂ ಡಿಜಿಟಲ್ ಪಾವತಿ ಅಳವಡಿಸಿಕೊಳ್ಳ ಬೇಕು ಎಂದ ಅವರು ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಿಸ್ಟರ್ ಚಾರ್ಲ್ಸ್ ಮನೆ ಮದ್ದು ಬಗ್ಗೆ ಮಾಹಿತಿ ನೀಡಿ, ಶೀತ, ಕೆಮ್ಮು ಮತ್ತಿತರ ಸಣ್ಣಪುಟ್ಟ ಕಾಯಿಲೆಗಳನ್ನು ಮನೆ ಮದ್ದಿನಿಂದ ಗುಣಪಡಿಸಬಹುದು ಎಂದರು. ಮನೆ ಮದ್ದು ತಯಾರಿಸುವ ವಿಧಾನ, ನಾಟಿ ಔಷಧಿ, ಯೋಗಾಸನದ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಿಸ್ಟರ್ ಚಾರ್ಲ್ಸ್ ರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾ ಕೇಶವ್, ಪಟ್ಟಣ ಮಾರಾಟ ಸಮಿತಿ ಸದಸ್ಯ ಜಗದೀಶ್, ಸಮುದಾಯ ಸಂಪನ್ಮೂಲ ವ್ಯಕ್ತಿ ಶೃತಿ, ಎನ್.ಪಿ.ರಕ್ಷಿತಾ, ಸ್ನೇಹ ಇದ್ದರು.